Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ಶಿವಳ್ಳಿ ಸಭಾದಿಂದ ಪ್ರತಿಭಾ ಪುರಸ್ಕಾರ


ಕಿನ್ನಿಗೋಳಿ : ಪ್ರತಿಭೆ ಮತ್ತು ಪ್ರಯತ್ನದಿಂದ ಸಾಧನೆಯೆಡೆಗೆ ಸಾಗಬೇಕು. ಸಾಧಕರನ್ನು ಗೌರವಿಸುವ, ಅನುಸರಿಸುವ ಗುಣ ನಮ್ಮಲ್ಲಿರಬೇಕು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಶಿಬರೂರು ಕೈಯೂರು ಶ್ರೀ ಗುರುರಾಘವೇಂದ್ರ ಸನ್ನಿಧಿಯಲ್ಲಿ ನಡೆದ ಕಟೀಲು ವಲಯ ಶಿವಳ್ಳಿ ಸಭಾ ಹಾಗೂ ಗುರುರಾಘವೇಂದ್ರ ಭಜನಾ ಮಂಡಳಿ ಟ್ರಸ್ಟ್  ವತಿಯಿಂದ ಆಯೋಜಿಸಲಾದ ಭಜನಾ ಮಂಗಲೋತ್ಸವದ ಸಂದರ್ಭ ಪ್ರತಿಭಾ ಪುರಸ್ಕಾರ ಹಾಗೂ ಸಂಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಯುಸಿ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ಶಿವಮನ್ಯು ಭಟ್, ಪ್ರಜ್ಞಾ ಪಿ. ರಾವ್, ಅನ್ವಿತಾ ಉಡುಪ, ಎಸ್. ಕೇಶವ ಭಟ್, ಚ್ಯವನ ಉಡುಪ, ಶ್ರೀಲಕ್ಷ್ಮೀ ಎ. ಉಡುಪ, ಜಿ. ಅಪೂರ್ವ, ಹರಿಪ್ರಿಯ ಭಟ್ ಇವರನ್ನು ಅಭಿನಂದಿಸಲಾಯಿತು. ಉದ್ಯಮ, ಸಮಾಜಸೇವೆ, ಧಾರ್ಮಿಕ ಕೊಡುಗೆಗಳಿಂದ ಜನಪ್ರಿಯರಾದ ಕೋಡು ಶ್ರೀನಿವಾಸ ಭಟ್ ಅವರನ್ನು ಸಂಮಾನಿಸಲಾಯಿತು. ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.
ಕಟೀಲು ದೇಗುಲದ ಅರ್ಚಕ ಅನಂತ ಆಸ್ರಣ್ಣ, ಇನ್ನಾ ಭಾರ್ಗವ ಟ್ರಸ್ಟ್‌ನ ರಾಜ ಭಟ್, ಬಜಪೆ ರಾಘವೇಂದ್ರ ಆಚಾರ್ಯ, ವಾಸುದೇವ ಭಟ್, ಸುಧಾ ಆಚಾರ್ಯ, ಧಾರ್ಮಿಕ ಪರಿಷತ್ ಸದಸ್ಯ ಕೋರ‍್ಯಾರ್ ಸುಬ್ರಹ್ಮಣ್ಯ ಆಚಾರ್, ಶಿವಳ್ಳಿ ಸಭಾದ ಅನಂತಪದ್ಮನಾಭ ಆಚಾರ‍್ಯ, ರಾಮಚಂದ್ರ ಉಡುಪ, ಅನಂತ ಭಟ್ ಕುಲ್ಲಂಗಾಲ ಮುಂತಾದವರಿದ್ದರು. ಸುಪ್ರಿಯಾ ಆಚಾರ್ಯ ಪ್ರಾರ್ಥಿಸಿದರು. ಹಂಸನಿ ಉಡುಪ ಸಂಮಾನಿತರ ವಿವರ ನೀಡಿದರು. ವಸಂತಿ ಕೇಶವ ಭಟ್ ನಿರೂಪಿಸಿದರು.