ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಸತತ ಮೂರನೇ ವರ್ಷ ನೈಜ ಚುನಾವಣಾ ಅನುಭವ ನೀಡುವ ಚುನಾವಣಾ ಆಪ್ ಬಳಸಿ ಶಾಲಾ ಚುನಾವಣೆ
ಬಜಪೆ:ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಸತತ ಮೂರನೇ ವರ್ಷ ನೈಜ ಚುನಾವಣಾ ಅನುಭವ ನೀಡುವ ಚುನಾವಣಾ ಆಪ್ ಬಳಸಿ ಶಾಲಾ ಚುನಾವಣೆಯು ನಡೆಯಿತು.
ಶಾಲಾಭಿಮಾನಿ ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು ಅವರು ಅಣಕು ಮತದಾನಕ್ಕೆ ಇ ವಿ ಎಂ ನ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು . ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸುದೀಪ್ ಅಮೀನ್ ಅಣಕು ಮತದಾನದಲ್ಲಿ ಪಾಲ್ಗೊಂಡು ಮತಯಂತ್ರದ ಆಪ್ ಮಾದರಿಯ ಕಾರ್ಯನಿರ್ವಹಣಾ ವಿಧಾನವನ್ನು ಪರಿಶೀಲಿಸಿ ಚುನಾವಣೆಗೆ ಅಭ್ಯರ್ಥಿಗಳಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಜಗತ್ತಿನ ಅತಿ ಹೆಚ್ಚು ಮತದಾರರು ಇರುವ ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮಹತ್ವ, ಮತದಾರರ ಪಾಲ್ಗೊಳ್ಳುವಿಕೆಯ ಅಗತ್ಯತೆ ಹಾಗೂ ಆಪ್ ಬಳಸಿ ನೈಜ ಮತದಾನದ ಅನುಭವ ಪಡೆಯುವ ಬಗ್ಗೆ ಮತದಾರರ ಸಾಕ್ಷರತಾ ಸಂಘದ ನೋಡಲ್ ಶಿಕ್ಷಕಿ ಚಿತ್ರಾಶ್ರೀ ಕೆ. ಎಸ್ ವಿವರಿಸಿದರು.
ಅಭ್ಯರ್ಥಿಗಳು ಪ್ರತಿ ತರಗತಿಗೂ ತಮ್ಮ ಬೆಂಬಲಿಗರೊಂದಿಗೆ ತೆರಳಿ ತಾವು ಶಾಲೆಯ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುವ ಚುನಾವಣಾ ಪ್ರಣಾಳಿಕೆಯ ವಿವರ ನೀಡಿ ಮತಯಾಚನೆ ನಡೆಸಿದರು. ಶಾಲಾ ಶಿಕ್ಷಕರ ಶಿಫಾರಸ್ಸು ಪತ್ರದೊಂದಿಗೆ ಅಭ್ಯರ್ಥಿಗಳು ನಾಮಪತ್ರವನ್ನು ಮತದಾನ ಪ್ರಕ್ರಿಯೆಯ ಮುಖ್ಯಸ್ಥರಾದ ಶಾಲಾ ಮುಖ್ಯ ಶಿಕ್ಷಕರಿಗೆ ನಿಗದಿತ ದಿನಾಂಕದೊಂದಿಗೆ ಸಲ್ಲಿಸಿದ್ದು ಎಲ್ಲರ ವಿವರಗಳನ್ನು ಪರಿಶೀಲಿಸಲಾಗಿದ್ದು ಒಟ್ಟು 5 ನಾಮಪತ್ರಗಳಲ್ಲಿ ಎರಡು ನಾಮಪತ್ರಗಳು ಅಸಿಂದುಗೊಂಡು ಮೂವರು ವಿದ್ಯಾರ್ಥಿಗಳು ಚುನಾವಣಾ ಕಣದಲ್ಲಿದ್ದು
ಬಿರುಸಿನ ಪ್ರಚಾರ ಕೈಗೊಂಡಿದ್ದರು. ಅಭ್ಯರ್ಥಿಗಳ ಬೆಂಬಲಿಗರನ್ನು ಚುನಾವಣಾ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಪ್ರಚಾರ ನಿರ್ಬಂಧಿಸಿರುವ ಉದ್ದೇಶ ವಿವರಿಸಿ ಅಧ್ಯಕ್ಷಾಧಿಕಾರಿಯವರು ವ್ಯಾಪ್ತಿಯ ಹೊರಗೆ ಪ್ರಚಾರ ನಡೆಸುವಂತೆ ಸೂಚಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಹಾಗೂ ಶಾಲಾ ಗುರುತಿನ ಚೀಟಿಯನ್ನು ತೋರಿಸಿ ಮತದಾನದಲ್ಲಿ ಪಾಲ್ಗೊಂಡರು. ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಚಿಹ್ನೆಗಳನ್ನು ನಮೂದಿಸಲಾಗಿದ್ದು ವಿದ್ಯಾರ್ಥಿಗಳು ಕುತೂಹಲದಿಂದ ಮತದಾನ ನಡೆಸಲು ಸಹಕಾರಿಯಾಯಿತು. ಬ್ಯಾಲೆಟ್ ಪೇಪರ್ ನ ನಮೂನೆಯನ್ನು ವಿದ್ಯಾರ್ಥಿಗಳಿಗೆ ಮೊದಲಾಗಿ ಪರಿಚಯ ಮಾಡಲಾಗಿದ್ದು ಇದರ ಪ್ರತಿಯನ್ನು ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಬೂತ್ ಗಳಲ್ಲಿ ಅಳವಡಿಸಿದ್ದರು. ನೈಜ ಚುನಾವಣೆಯಲ್ಲಿರುವಂತೆ ಅಭ್ಯರ್ಥಿಗಳ ಗುರುತಿಸುವಿಕೆಗಾಗಿ ಏಜಂಟ್ ನೇಮಿಸಲಾಗಿದ್ದು ಅವರು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಮತಯಂತ್ರವಾಗಿ ಟ್ಯಾಬ್ ಬಳಸಲಾಗಿದ್ದು ವಿದ್ಯಾರ್ಥಿಗಳಿಗೆ ಮತಯಂತ್ರದ ಪರಿಕಲ್ಪನೆ ಸ್ಪಷ್ಟಪಡಿಸುವ ಅವಕಾಶ ಲಭಿಸಿತು. ವಿಶೇಷ ಚೇತನ ವಿದ್ಯಾರ್ಥಿಗೆ ಸಂಗಡಿಗರ ಸಹಾಯದಿಂದ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಎಲ್ಲರನ್ನೂ ಒಳಗೊಂಡ ಈ ಚುನಾವಣೆಯಲ್ಲಿ ಬೆರಳಿಗೆ ಶಾಯಿಯ ಗುರುತನ್ನು ಧರಿಸಿದ 8ನೇ ತರಗತಿಯ ವಿದ್ಯಾರ್ಥಿಗಳು ಹೆಮ್ಮೆಪಟ್ಟರು.
71 ಮತಗಳನ್ನು ಗಳಿಸಿದ, 2025-26ರಲ್ಲಿ ರಾಷ್ಟ್ರಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಹಿರಿಮೆಯ ಕುಮಾರಿ ಮೌಲ್ಯ ಆರ್.ಶೆಟ್ಟಿ ವಿದ್ಯಾರ್ಥಿ ನಾಯಕಿಯಾಗಿ ಆಯ್ಕೆಯಾಗಿರುತ್ತಾಳೆ.
ಮತದಾನ ಪ್ರಕ್ರಿಯೆಯಲ್ಲಿ ಅಧ್ಯಕ್ಷಾಧಿಕಾರಿಯಾಗಿ ಇಂದಿರಾ ಎನ್ ರಾವ್, ಉಪ ಅಧ್ಯಕ್ಷಾಧಿಕಾರಿಯಾಗಿ ಜ್ಯೋತಿ,ಎರಡನೇ ಮತದಾನ ಅಧಿಕಾರಿಯಾಗಿ ವಿದ್ಯಾಗೌರಿ, ರಾಜಶ್ರೀ, ಮೂರನೇ ಮತದಾನ ಅಧಿಕಾರಿಯಾಗಿ ಪೂರ್ಣಿಮಾ, ಶಿಸ್ತು ಪಾಲನಾ ಅಧಿಕಾರಿಗಳಾಗಿ , ವಿನ್ನಿ ನಿರ್ಮಲ ಡಿಸೋಜ ಹಾಗೂ ಮೈಕ್ರೋ ಅಬ್ಸರ್ವರ್ ಚಿತ್ರಾಶ್ರೀ, ಸೆಕ್ಟರ್ ಅಧಿಕಾರಿಯಾಗಿ ಡಾ.ಅನಿತ್ ಕುಮಾರ್, ಮಾಸ್ಟರ್ ಟ್ರೈನರ್ ಆಗಿ ರಮ್ಯಾ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.
ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಒಟ್ಟು 130 ವಿದ್ಯಾರ್ಥಿಗಳು ಮತ ಚಲಾಯಿಸಿದ್ದು ಒಬ್ಬರೂ ಮತವನ್ನು ನೋಟ ಆಯ್ಕೆಗೆ ಬಳಸದೇ ಇದ್ದಿದ್ದು ವಿಶೇಷವೆನಿಸಿತು.
"ಬಹು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿರುವ ನಮ್ಮ ದೇಶದ ವಿದ್ಯಾರ್ಥಿಗಳು ಪ್ರೌಢಾವಸ್ಥೆಯಲ್ಲಿಯೇ ಸಂವಿಧಾನದ ಮೂಲ ಆಶಯವಾದ ಸಮಾನ ಅವಕಾಶದ ಆಧಾರದಲ್ಲಿ ನಡೆಯುವ ಸರ್ವತ್ರಿಕ ಮತ್ತು ಗೌಪ್ಯ ಮತದಾನವನ್ನು ಮೊಬೈಲ್, ಟ್ಯಾಬ್ ಮತ್ತು ಮೊಬೈಲ್ ಆಪ್ ಗಳನ್ನ ಬಳಸಿ ತಿಳಿಯುವ ನೈಜ ಮತದಾನದ ಅನುಭವಗಳನ್ನು ನಮ್ಮೂರ ಸರ್ಕಾರಿ ಶಾಲೆ ಒದಗಿಸಿ ಕೊಟ್ಟಿರುವುದು ಶ್ಲಾಘನೀಯ"
- ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು