Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜಪೆ ಬೆಥನಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಜಪೆ:ಇಲ್ಲಿನ  ಬೆಥನಿ ಅಂಗ್ಲ ಮಾಧ್ಯಮ  ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಪ್ರಾರ್ಥನೆ ಹಾಗೂ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ 
 ಶ್ರೀಮತಿ ಗ್ಲಾಡಿಸ್ ಡಿ ಸೋಜ ರವರು  ಪರಿಸರ ಸಂರಕ್ಷಣೆಯ ಮಹತ್ವ, ವೃಕ್ಷಾರೋಪಣೆಯ ಅಗತ್ಯತೆ ಹಾಗೂ ಪ್ರಕೃತಿಯನ್ನು ಉಳಿಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ  ಸಂದೇಶ ನೀಡಿದರು. ಪರಿಸರವನ್ನು ಕಾಪಾಡುವುದು ಇಂದಿನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು. 
ಶಾಲೆಯ ಮುಖ್ಯ ಶಿಕ್ಷಕಿ  ವಂ. ಭಗಿನಿ ವೀಣಾ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಪ್ರಕೃತಿಯನ್ನು ಉಳಿಸುವ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಬಹುದು ಎಂದರು.
 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರ ಜಾಗೃತಿಯನ್ನು ಮೂಡಿಸುವ ಭಾಷಣ, ಹಾಡು, ನೃತ್ಯ, ಕವಿತೆ ಹಾಗೂ ಕಿರುನಾಟಕಗಳನ್ನು ಪ್ರದರ್ಶಿಸಿದರು. ಶಾಲಾ ಆವರಣದಲ್ಲಿ ವೃಕ್ಷಾರೋಪಣೆಯ ಕಾರ್ಯಕ್ರಮವೂ ನಡೆದಿದ್ದು, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿ ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 
ವಂ, ಭಗಿನಿ ಜಾಸ್ಮಿನ್ ವಿಲ್ಮಾ  ಕಾರ್ಯಕ್ರಮ  ನಿರೂಪಿಸಿದರು. ರಾಜೇಶ್ವರಿ  ಸ್ವಾಗತಿಸಿ,  ಧನ್ಯವಾದವಿತ್ತರು.