Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಹಿಳಾ ಸಬಲೀಕರಣದಲ್ಲಿ ಸೇವಾ ಪ್ರತಿನಿಧಿಗಳ ಪಾತ್ರ ಮುಖ್ಯವಾದುದು - ದಿನೇಶ್ ಪೂಜಾರಿ

ಬಜಪೆ:ಮಹಿಳೆಯರನ್ನು ಕೌಟುಂಬಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸೇವಾ ಪ್ರತಿನಿಧಿಗಳ ಪಾತ್ರ  ಪ್ರಮುಖವಾದುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಜ್ಞಾನವಿಕಾಸ ವಿಭಾಗದ ನಿರ್ದೇಶಕ  ದಿನೇಶ್ ಪೂಜಾರಿ ಹೇಳಿದರು. ಅವರು ಬುಧವಾರದಂದು ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಜ್ಞಾನ ವಿಕಾಸ ಸೇವಾ ಪ್ರತಿನಿಧಿಗಳ ಕ್ರಿಯಾ ಯೋಜನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸೇವಾ ಪ್ರತಿನಿಧಿಗಳು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಉತ್ಸಾಹ ಭರಿತ ಮಾತುಗಳ ಮೂಲಕ ಕಾರ್ಯ ಕ್ಷೇತ್ರದಲ್ಲಿ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಸದಸ್ಯರ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪೂರಕವಾಗಿ ಬೇಕಾದಂತಹ ತರಬೇತಿ ಹಾಗೂ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು. 

ಪ್ರಸ್ತುತ ವರ್ಷದ ಕ್ರಿಯಾಯೋಜನೆ ಬಗ್ಗೆ ವಿಮರ್ಶೆ ನಡೆಸಿ ಕಾರ್ಯಕ್ರಮಗಳನ್ನು ವಿಂಗಡಣೆ ಮಾಡಲಾಯಿತು. ತಾಲೂಕಿನ ಯೋಜನಾಧಿಕಾರಿ ಗಿರೀಶ್ ಕುಮಾರ್ ರವರು ಹೊಸ ಕೇಂದ್ರ ರಚನೆಯ ಬಗ್ಗೆ, ಸಂಘಗಳ ಸೇರ್ಪಡೆ ಬಗ್ಗೆ  ಮಾಹಿತಿ ನೀಡಿ ಪ್ರಸ್ತುತ ವರ್ಷದಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಶುಭ ಹಾರೈಸಿದರು.  ಸಭೆಯಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ  ಪ್ರಮೀಳಾ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.