ಬಜ್ಪೆ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಸಂಭ್ರಮದ ಆರಂಭ
ಬಜಪೆ:ಬಜ್ಪೆಯ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ವರ್ಷದ ಮೊದಲ ದಿನವು ಸಂಭ್ರಮ, ಉತ್ಸಾಹ ಮತ್ತು ಸಂತಸದ ವಾತಾವರಣದಲ್ಲಿ ಆರಂಭವಾಯಿತು. ಕೆ.ಜಿ.ಯಿಂದ 10ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯವರು ಆತ್ಮೀಯವಾಗಿ ಸ್ವಾಗತಿಸಿದರು.
ಶಾಲೆಯ ಮೊದಲ ದಿನದಂದು ವಿದ್ಯಾರ್ಥಿಗಳು ಹೊಸ ಉತ್ಸಾಹ ಮತ್ತು ನಿರೀಕ್ಷೆಗಳೊಂದಿಗೆ ಶಾಲೆಗೆ ಆಗಮಿಸಿದರು. ಶಾಲಾ ಆವರಣವು ಮಕ್ಕಳ ನಗು, ಸಂತೋಷ ಮತ್ತು ಚಟುವಟಿಕೆಗಳಿಂದ ಕಂಗೊಳಿಸಿತು.
ಈ ಸಂದರ್ಭದಲ್ಲಿ. ಶಾಲಾ ಮುಖ್ಯ ಶಿಕ್ಷಕಿ ವಂ. ಭಗಿನಿ ವೀಣಾ ಡಿಸೋಜರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, “ಹೊಸ ಶೈಕ್ಷಣಿಕ ವರ್ಷವು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಜ್ಞಾನ, ಶಿಸ್ತು, ಮೌಲ್ಯಗಳು ಮತ್ತು ಸಾಧನೆಗಳ ಹೊಸ ಅಧ್ಯಾಯವಾಗಲಿ. ಪ್ರತಿಯೊಬ್ಬರೂ ಶ್ರಮ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸದೊಂದಿಗೆ ತಮ್ಮ ಗುರಿಗಳನ್ನು ಸಾಧಿಸಲಿ” ಎಂದು ಆಶೀರ್ವದಿಸಿದರು.
ಶಿಕ್ಷಕರೂ ಸಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳೊಂದಿಗೆ ಶುಭಾಶಯಗಳನ್ನು ತಿಳಿಸಿ, ಅವರ ಸರ್ವತೋಮುಖ ಬೆಳವಣಿಗೆಗಾಗಿ ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.
ಹೊಸ ಶೈಕ್ಷಣಿಕ ವರ್ಷವು ಎಲ್ಲ ವಿದ್ಯಾರ್ಥಿಗಳಿಗೆ ಯಶಸ್ಸು, ಸಂತೋಷ ಹಾಗೂ ಸಾರ್ಥಕ ಅನುಭವಗಳನ್ನು ತಂದುಕೊಡಲಿ ಎಂದು ಶಾಲೆಯ ವತಿಯಿಂದ ಶುಭ ಹಾರೈಸಲಾಯಿತು.