ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಶಾಲಾ ಪ್ರಾರಂಭೋತ್ಸವ ಸಮಾರಂಭ
ಬಜಪೆ :ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಶಾಲಾ ಪ್ರಾರಂಭೋತ್ಸವ ಸಮಾರಂಭವನ್ನು ಸೋಮವಾರ ಅದ್ದೂರಿಯಿಂದ ಆಚರಿಸಲಾಯಿತು .ಎಕ್ಕಾರು ಶ್ರೀ ಕೊಡಮಣಿ ತ್ತಾಯ ದೈವಸ್ಥಾನದ ದ್ವಾರದ ಬಳಿಯಿಂದ ಬ್ಯಾಂಡ್ ವಾದನಗಳೊಂದಿಗೆ ಘೋಷಣೆಗಳು,ಘೋಷವಾಕ್ಯಗಳ ಜೊತೆಗೆ ಎಂಟನೇ ತರಗತಿಗೆ ದಾಖಲಾದ ಹೊಸ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು. ದಾಖಲಾತಿಗೊಂಡ ಹೊಸ ವಿದ್ಯಾರ್ಥಿಗಳ ಕೈಗೆ ಹೈಡ್ರೊಜನ್ ತುಂಬಿದ ಬಲೂನುಗಳನ್ನು ನೀಡಿ ಆಕಾಶಕ್ಕೆ ಹಾರಿ ಬಿಟ್ಟು ಸಾಂಕೇತಿಕವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಪುಷ್ಪಾರ್ಚನೆ ಗೈದು ಸ್ವಾಗತಿಸಲಾಯಿತು.
ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ದ.ಕ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಶಶಿಧರ ಜಿ .ಎಸ್ ಅವರು ನಾಡಿನ ಮಣ್ಣು ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕನಸು ಕಾಣಬೇಕು. ಆಕಾಶದತ್ತ ಹಾರುವ ಹೈಡ್ರೋಜನ್ ಬಲೂನ್ ನಮ್ಮ ವಿದ್ಯಾರ್ಥಿಗಳ ಕುತೂಹಲಭರಿತ ಮನೋಭಾವ ಮತ್ತು ಉನ್ನತ ಕನಸುಗಳ ಸಂಕೇತವಾಗಿದೆ. ಹೈಡ್ರೋಜನ್ ಅತ್ಯಂತ ಹಗುರವಾದ ಮೂಲಧಾತುವಾಗಿದ್ದು ಮೇಲಕ್ಕೆ ಏರುವಂತೆ, ನಮ್ಮ ವಿದ್ಯಾರ್ಥಿಗಳೂ ಜ್ಞಾನವನ್ನು ಅರಸುವ, ಪ್ರಶ್ನೆಗಳನ್ನು ಕೇಳುವ, ಹೊಸ ವಿಚಾರಗಳನ್ನು ಅನ್ವೇಷಿಸುವ ಹಾಗೂ ಶಿಕ್ಷಣದ ಮೂಲಕ ಉನ್ನತ ಸಾಧನೆಗಳನ್ನು ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮಿತಿಗಳನ್ನು ಮೀರಿ ಅನಂತ ಸಾಧ್ಯತೆಗಳತ್ತ ಸಾಗುವ ಆಲೋಚನೆಯಿಂದ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಈ ಸಂದರ್ಭ ಸರಕಾರದಿಂದ ನೀಡಲಾಗುವ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಎಸ್ ಡಿ ಎಂ ಸಿ ವತಿಯಿಂದ ಲೇಖನ ಸಾಮಗ್ರಿ ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುದೀಪ್ ಅಮೀನ್, ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು, ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಎಕ್ಕಾರು ಗ್ರಾ.ಪಂ ಮಾಜಿ ಸದಸ್ಯ ವಿಕ್ರಮ್ ಮಾಡ, ಎಸ್ ಡಿ ಎಂ ಸಿ ಸದಸ್ಯರಾದ ಸುರೇಶ್ ಶೆಟ್ಟಿ ರತನ್ ಕುಮಾರ್ ಶೆಟ್ಟಿ , ಹೇಮಂತ, ಶ್ರೀಮತಿ ಲತಾ, ದುರ್ಗಾ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ , ಪ್ರಶಾಂತ , ಸುರೇಶ್, ದುರ್ಗಾ ಪ್ರಸಾದ್ ಉಪಸ್ಥಿತರಿದ್ದರು. ಸಹಕಾರ ರತ್ನ ಮೋನಪ್ಪ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಐಸ್ ಕ್ರೀಮ್ ಹಾಗೂ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಇಂದಿರಾ ಎನ್ ರಾವ್ ಸ್ವಾಗತಿಸಿದರು. ಶ್ರೀಮತಿ ಪೂರ್ಣಿಮಾ ಎಚ್. ಎಮ್ ಪ್ರಸ್ತಾವನೆಗೈದರು. ಶ್ರೀಮತಿ ಜ್ಯೋತಿ ಹಾಗೂ ಶ್ರೀಮತಿ ರಾಜಶ್ರೀ ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಶ್ರೀಮತಿ ಚಿತ್ರ ಶಾಲೆಯ ಸಾಧನೆಗಳನ್ನು ತಿಳಿಸಿದರು, ಶ್ರೀಮತಿ ವಿನ್ನಿ ನಿರ್ಮಲ ಡಿಸೋಜಾ ವಂದಿಸಿದರು. ಶ್ರೀಮತಿ ವಿದ್ಯಾ ಗೌರಿ ಕಾರ್ಯಕ್ರಮ ನಿರೂಪಿಸಿದರು.