ಎಕ್ಕಾರು ಕ್ಲಸ್ಟರ್‌ನಲ್ಲಿ ದಾಖಲಾತಿ ಆಂದೋಲನ – 2026
ಬಜಪೆ:ಮಂಗಳೂರು ಉತ್ತರ ಕ್ಷೇತ್ರದ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆಂದೋಲನವು ಯಶಸ್ವಿಯಾಗಿ ನಡೆಯಿತು. ಶಿಕ್ಷಣ ಇಲಾಖೆಯ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ 46 ವಿದ್ಯಾರ್ಥಿಗಳು ದಾಖಲಾತಿ ಪಡೆದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುದೀಪ್ ಅಮೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸರ್ಕಾರದ ಸುತ್ತೋಲೆಯಂತೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಶೇ.100 ದಾಖಲಾತಿ, ಶೂನ್ಯ ಶಾಲೆಬಿಡುವಿಕೆ, ಗುಣಮಟ್ಟದ ಶಿಕ್ಷಣ, ಎಫ್ ಎಲ್ ಎನ್ ಕೌಶಲ್ಯಗಳ ಅಭಿವೃದ್ಧಿ, ಸಹಪಠ್ಯ ಚಟುವಟಿಕೆಗಳ ಉತ್ತೇಜನ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೋಷಕರಿಗೆ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಹಾಗೂ ವಿವಿಧ ಶೈಕ್ಷಣಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಮಕ್ಕಳಲ್ಲಿ ಶಿಸ್ತು, ಮೌಲ್ಯ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿಜ್ಞಾನ ಚಟುವಟಿಕೆಗಳ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಶಾಲೆಯನ್ನು "ಉತ್ತಮ ಶಿಕ್ಷಣ – ಉಜ್ವಲ ಭವಿಷ್ಯ" ಎಂಬ ಧ್ಯೇಯದೊಂದಿಗೆ ಅಭಿವೃದ್ಧಿಪಡಿಸುವ ಸಂಕಲ್ಪ ವ್ಯಕ್ತಪಡಿಸಲಾಯಿತು.
ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸುವಂತೆ ಪೋಷಕರಿಗೆ ಮನವಿ ಮಾಡಲಾಯಿತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ರಾವ್,ಎಸ್‌ಡಿಎಂಸಿ ಅಧ್ಯಕ್ಷ ಸುದೀಪ್ ಅಮೀನ್ , ಸದಸ್ಯರಾದ ಸುರೇಶ್ ಶೆಟ್ಟಿ, ಹೇಮಂತ್,ವಿನೋದ, ಶ್ರೀಮತಿ ಶ್ಯಾಮಲಾ ಉಪಸ್ಥಿತರಿದ್ದರು.ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು