ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ -ಇಬ್ಬರು ಗಂಭೀರ
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡ್ ಕನ್ವೆನ್ಷನ್ ಹಾಲ್ ಬಳಿ ನಿಲ್ಲಿಸಿದ್ದ ಕಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಹಾಗೂ ಸಹಸವಾರಿಣಿ ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ
ಗಾಯಗೊಂಡವರನ್ನು ಉಡುಪಿ ಜಿಲ್ಲೆಯ ಎರ್ಮಾಳ್ ನಿವಾಸಿಗಳಾದ ಸವಾರ ಬದ್ರುದ್ದೀನ್ (30) ಮತ್ತು ಸಹಸವಾರಿಣಿ ಪತ್ನಿ ಸುಝಾನಾ(26) ಎಂದು ಗುರುತಿಸಲಾಗಿದೆ
ಗುರುವಾರ ಸಂಜೆ 4:30 ಸುಮಾರಿಗೆ ಉಡುಪಿ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಮಂಗಳೂರು ನಿವಾಸಿ ಭುಜಂಗ ಎಂಬವರು ಮುಲ್ಕಿ ಸಮೀಪದ ಕೋಲ್ನಾಡ್ ಕನ್ವೆನ್ಷನ್ ಹಾಲ್ ಎದುರುಗಡೆ ಇರುವ ಗೂಡಂಗಡಿಗೆ ಸೀಯಾಳ ಕುಡಿಯಲು ಹೆದ್ದಾರಿ ಬದಿ ನಿಲ್ಲಿಸಿ ತೆರಳಿದ್ದು ಈ ಸಂದರ್ಭ ಎರ್ಮಾಳ್ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಅದರ ಸವಾರ ಬದ್ರುದ್ದೀನ್ ರವರ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆಗೆ ಸ್ಕೂಟರ್ ಸವಾರ ಬದ್ರುದ್ದೀನ್ ಹಾಗೂ ಸಹ ಸವಾರಿಣಿ ಅವರ ಪತ್ನಿ ಸುಝಾನಾ ರವರು ಸಿನಿಮೀಯ ಮಾದರಿಯಲ್ಲಿ ಕಾರಿನ ಮೇಲೆ ಬಿದ್ದು ಎದುರು ಭಾಗದಿಂದ ಕೆಳಗೆ ಬಿದ್ದಿದ್ದಾರೆ.
ಈ ಸಂದರ್ಭ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು ಮುಕ್ಕ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ
ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.