ಮುಲ್ಕಿ: ಭಾರೀ ಮಳೆ ಗಾಳಿಗೆ ರಸ್ತೆಗೆ ಬಿದ್ದ ಮರ- ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಮುಲ್ಕಿ:ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿ ಸುರಿದ ಭಾರಿ ಗುಡುಗು ಸಿಡಿಲಿನ ಮಳೆಗೆ ಅನಾಹುತಗಳು ಸಂಭವಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾತ್ರಿ 10 ಗಂಟೆ ಸುಮಾರಿಗೆ ಮುಲ್ಕಿ ಪರಿಸರದಲ್ಲಿ ಬೀಸಿದ ಗಾಳಿ ಹಾಗೂ ಸುರಿದ ಮಳೆಗೆ ಕಾರ್ನಾಡ್ ನಿಂದ ಬೈಪಾಸ್ ಸಂಪರ್ಕ ಹೆದ್ದಾರಿಗೆ ಬೃಹದಾಕಾರದ ಮಾವಿನ ಮರ ಬಿದ್ದು ಸಂಚಾರ ಅಸ್ತವ್ಯಸ್ತ ಉಂಟಾಯಿತು.
ಮಾವಿನ ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು ಈ ಸಂದರ್ಭ ರಸ್ತೆ ಬದಿಯಲ್ಲಿದ್ದ ಸುಮಾರು7 ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಮೆಸ್ಕಾಂಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ
ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಬಿದ್ದ ಕಾರಣ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿ ವಾಹನಗಳು ಸುತ್ತು ಬಳಸಿ ಸಂಚಾರ ನಡೆಸಿದವು ಮಂಗಳವಾರ
ರಾತ್ರಿ 10 ಗಂಟೆಗೆ ಮರ ರಸ್ತೆಗೆ ಬಿದ್ದರೂ ಮರುದಿನ ಬುಧವಾರ ಬೆಳಗ್ಗೆ 9 ಗಂಟೆ ವರೆಗೆ ತೆರವುಗೊಳಿಸದ ಮೆಸ್ಕಾಂ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಆಕ್ರೋಶ ವ್ಯಕ್ತಪಡಿಸಿ ಇಲಾಖೆಯ ಸಿಬ್ಬಂದಿಗಳನ್ನು ಸ್ಥಳದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಮರ ಹಾಗೂ ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸಿಡಿಲು ಸಹಿತ ಸುರಿದ ಭಾರೀ ಮಳೆಗೆ ಅನೇಕ ಸಣ್ಣಪುಟ್ಟ ಅವಾಂತರಗಳು ನಡೆದಿದ್ದು ಗ್ರಾಮೀಣ ಪ್ರದೇಶದಲ್ಲಿ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ