Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಅವೈಜ್ಞಾನಿಕ ಅಮೃತ್ ಕುಡಿಯುವ ಯೋಜನೆ ಕಾಮಗಾರಿ-ವಾಹನ ಸವಾರರಿಗೆ ಸಂಕಷ್ಟ



ಮುಲ್ಕಿ:ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿ ಅಳವಡಿಸುತ್ತಿರುವ ಅಮೃತ್ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ವಾಹನ ಸವಾರರು ಪಾದಾಚಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ 
ಕಳೆದ ದಿನದ ಹಿಂದೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಆಡಳಿತದ ಪ್ರಜಾ ಸೌಧದ ಬಳಿ ಮುಂಜಾಗರೂಕತೆ  ವಹಿಸದೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಎರ್ರಾ ಬಿರ್ರಿಯಾಗಿ ನಡೆಯುತ್ತಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯದ ಬಿಎಸ್ಎನ್ಎಲ್ ಕೇಬಲ್ ಗೆ ಹಾನಿ ಮಾಡಲಾಗಿದೆ, ಇದರಿಂದ ಅನೇಕ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. 
ಮಳೆ ನೀರು ಹರಿಯುವ ಚರಂಡಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಪೈಪ್ ಲೈನ್ ಹಾಕಿ ಮಣ್ಣು ಮುಚ್ಚಿದ್ದು ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ.
ಇದೇ ರೀತಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕುಬೆವೂರು ಶಿಮಂತೂರು ದೇವಸ್ಥಾನ ಸಂಪರ್ಕ ರಸ್ತೆ, ಕೆಂಚನಕೆರೆ ತಿರುವು ಬಳಿ ಹೆದ್ದಾರಿ ಅಗೆದು ಹಾಕಿದ್ದು  ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ 
ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮೊದಲೇ ಕೆಟ್ಟು ಕೆರ ಹಿಡಿದಿದ್ದು ಜೊತೆಗೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಥಳೀಯ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸರಿಯಾದ ಕಾಮಗಾರಿ ನಡೆಸುವಂತೆ ಪೈಪ್ ಲೈನ್ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಇಲ್ಲದಿದ್ದರೆ ತಾಲೂಕು ಆಡಳಿತ ಪ್ರಜಾ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.