Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಿಧನ ವಾರ್ತೆ:ಕಟೀಲು ಪಾಂಡುರಂಗ ಭಟ್ ನಿಧನ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ 55  ವರ್ಷಗಳಿಂದ ಉದ್ಯೋಗಿಯಾಗಿದ್ದ, ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ರುಕುಮಾಯಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪಾಂಡುರಂಗ ಭಟ್ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು 94ರ ಇಳಿಹರೆಯದ ತಾಯಿ, ಪತ್ನಿ, ಇಬ್ಬರು ಗಂಡು, ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.
ಕಟೀಲು ದೇವಸ್ಥಾನದಲ್ಲಿ ಅತ್ಯಂತ ಹೆಚ್ಚು ವರ್ಷಗಳಿಂದ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ ಪಾಂಡುರಂಗ ಭಟ್ಟರು, ತನ್ನ 20 ನೆಯ ವಯಸ್ಸಿಗೆ ಕಟೀಲು ದೇವಸ್ಥಾನಕ್ಕೆ ಸೇರಿದ್ದರು. 65 ನೆಯ ವಯಸ್ಸಿಗೆ ನಿವೃತ್ತರಾದರೂ, ಅವರ ನಿಸ್ಪೃಹ ಸೇವೆ, ಭಕ್ತರೊಂದಿಗಿನ ಆತ್ಮೀಯತೆ, ಆತಿಥ್ಯ, ದಿನಂಪ್ರತಿ ಆಗುವ ಹನ್ನೆರಡು ರಂಗಪೂಜೆಗಳ ಸೇವಾದಾರರ ಸಂಪರ್ಕ, ದೇಗುಲಕ್ಕೆ ಬರುವ ಗಣ್ಯರರನ್ನು ಆದರಿಸುವ ರೀತಿ, ನೊಂದು ದೇವರಲ್ಲಿ ಶರಣಾಗತಿಯಿಂದ ಬರುವ ಭಕ್ತರನ್ನು ಸಂತೈಸಿ ಕಳುಹಿಸುವ ಮಾನವೀಯತೆಯಂತಹ ಗುಣಗಳನ್ನು ಗೌರವಿಸಿ ಮತ್ತೆ ದೇಗುಲದಲ್ಲೇ ಮುಂದುವರಿಯುವಂತೆ ಆಡಳಿತ ಮಂಡಳಿ ಅವಕಾಶ ನೀಡಿತ್ತು.
ಸ್ವತಃ ಭಜನಾಕಾರರಾಗಿ, ತಬಲಾ ವಾದಕರಾಗಿ, ಯಕ್ಷಗಾನ ಕಲಾವಿದರಾಗಿ, ಕಟೀಲು ಮೇಳಗಳ ಹಿರಿಯ ಕಲಾವಿದರ ಒಡನಾಡಿಯಾಗಿ, ದೇಗುಲಕ್ಕೆ ಬರುವ ಬಹುಶ್ರುತ ವಿದ್ವಾಂಸರ ಆತ್ಮೀಯರಾಗಿ ಜನಪ್ರಿಯರಾಗಿದ್ದ ಪಾಂಡುರಂಗ ಭಟ್ಟರಿಗೆ ಅಪಾರ ಅಭಿಮಾನಿಗಳಿದ್ದರು. ಸಾವಿರಾರು ಕೃತಿಗಳನ್ನು ಓದಿಕೊಂಡಿದ್ದ ಅವರು ಸಂಗೀತ, ಸಾಹಿತ್ಯ, ರಾಜಕೀಯ ಹೀಗೆ ನಾನಾ ವಿಚಾರಗಳನ್ನು ಆಳವಾಗಿ ಬಲ್ಲವರಾಗಿದ್ದರು. ಹಳೆಗನ್ನಡದ ಕಾವ್ಯಗಳು, ನೂರಾರು ದಾಸರ ಪದಗಳು ಕಂಠಪಾಠವಾಗಿದ್ದವು. 
ಗುಂಡ್ಯಡ್ಕ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು.
ಕಟೀಲು ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು, ನಾನಾ ಕ್ಷೇತ್ರಗಳ ಗಣ್ಯರು ಪಾಂಡುರಂಗ ಭಟ್ಟರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.