ಕಟೀಲು ದೇವಳಕ್ಕೆ ಶುಕ್ರವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಕ್ಕೆ ಶುಕ್ರವಾರದಂದು ಸಾವಿರಾರು ಮಂದಿ ಭಕ್ತರು ಭೇಟಿ ನೀಡಿದರು. ಪ್ರತೀ ಶುಕ್ರವಾರ ಮತ್ತು ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿದ್ದರೂ, ಕಳೆದ ಒಂದು ತಿಂಗಳಿಂದ ದೇವಳಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಕುಟುಂಬ ಸಮೇತರಾಗಿ ಭಕ್ತರು ದೇವಳಕ್ಕೆ ಭೇಟಿ ನೀಡುತ್ತಿದ್ದಾರೆ. ಶುಕ್ರವಾರ ಮತ್ತು ಭಾನುವಾರ ಭಕ್ತರ ಸಂಖ್ಯೆ ನಿಭಾಯಿಸುವುದೇ ಸಾಧನೆಯಾಗಿದೆ. ಶುಕ್ರವಾರದಂದು ದೇವಳದ ಒಳ ಪ್ರವೇಶಿಸಲು ಸುಮಾರು 3೦೦ ಮೀಟರ್ ನಷ್ಟು ಸರಧಿ ಇತ್ತು.ದೇವಳದ ರಥ ಬೀದಿ ಹಾಗೂ ಸುತ್ತಲಿನ ಪಾರ್ಕಿಂಗ್ ಸಂಪೂರ್ಣ ತುಂಬಿಹೋಗಿದ್ದು, ದೇವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿ ಭಕ್ತರು ವಾಹನ ಪಾರ್ಕಿಂಗ್ ಮಾಡಿದ್ದರು. ದೇವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಯು ಬಹಳಷ್ಟು ಕಿರಿದಾಗಿದ್ದು, ಇದರಿಂದ ವಾಹನಗಳು ಸಂಚರಿಸುವುದೇ ಕಷ್ಟದಾಯಕವಾಗಿದೆ. ದೇವಳಕ್ಕೆ ಬೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವ ಕಾರಣ ದೇವಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಅಗಲೀಕರಣವಾಗಬೇಕಾಗಿದೆ.