ಕಟೀಲು ಶಿಕ್ಷಣಸಂಸ್ಥೆಗಳಿಗೆ ಸಂಗೀತ ಉಪಕರಣಗಳ ಕೊಡುಗೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಕ್ಷಣ ಸಂಸ್ಥೆಗಳಿಗೆ ಕಿನ್ನಿಗೋಳಿ ಅನುಗ್ರಹ ಸಹೋದರರು ಸುಮಾರು ೬೦ ವರ್ಷಗಳ ಹಿಂದಿನ ಲೆಗ್ ಹಾರ್ಮೋನಿಯಂ, ಹಾರ್ಮೋನಿಯಂ, ಅಷ್ಟೇ ಹಳೆಯದಾದ ತಬಲಾ, ಮದ್ದಲೆಗಳನ್ನು ನೀಡಿದರು.
ಸಂಗೀತ ಉಪಕರಣಗಳನ್ನು ಸ್ವೀಕರಿಸಿದ ಕಟೀಲು ದೇಗುಲದ ಅರ್ಚಕ ಕಮಲಾದೇವೀಪ್ರಸಾದ ಆಸ್ರಣ್ಣ ಮಾತನಾಡಿ, ಪುರಾತನವಾದುದು ಯಾವತ್ತಿಗೂ ಅಮೂಲ್ಯವಾದುದು. ಕಲಾಪ್ರಿಯಳಾದ ಕಟೀಲಮ್ಮನ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಈ ವಾದ್ಯಗಳು ಬಳಕೆಯಾಗಲಿವೆ ಎಂದರು.
ದಾನಿಗಳಾದ ವಾಸುದೇವ ರಾವ್, ನಿತ್ಯಾನಂದ, ರಾಧಾಕೃಷ್ಣ, ಗಣೇಶ್ ಕಿನ್ನಿಗೋಳಿ, ಉದ್ಯಮಿ ಜಯಕುಮಾರ ಮಯ್ಯ, ಹಾರ್ಮೋನಿಯಂ ಶಿಕ್ಷಕ ವಾಸು ಮಾಸ್ತರ್, ಕಟೀಲು ಶಿಕ್ಷಣ ಸಂಸ್ಥೆಗಳ ಮೇಲುಸ್ತುವಾರಿ ದಯಾನಂದ ಮಾಡ ಉಪಸ್ಥಿತರಿದ್ದರು.