ಬಜಪೆ - ಕಟೀಲು ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಕಟೀಲು:ಬಜಪೆ - ಕಟೀಲು ರಾಜ್ಯ ಹೆದ್ದಾರಿ 67 ರ ಹುಣ್ಸೆಕಟ್ಟೆ - -ಎಕ್ಕಾರು - ಕಟೀಲು ತನಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜ್ರಾಪಿಕ್ ಜಾಮ್ ಉಂಟಾದ ಘಟನೆ ಶುಕ್ರವಾರದಂದು ನಡೆದಿದೆ.
ಕಟೀಲು ಸೇತುವೆ ಸಮೀಪ,ಕಟೀಲು ಉಳ್ಳಂಜೆ ರಸ್ತೆಯ ಸಮೀಪ ಹಾಗೂ ಕಟೀಲು ಸೌಂದರ್ಯ ಪ್ಯಾಲೇಸ್ ಸಮೀಪ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದ ಕಾರಣ ಹೆದ್ದಾರಿಯುದ್ದಕ್ಕೂ ಟ್ರಾಪಿಕ್ ಜಾಮ್ ಆಗಲು ಕಾರಣವಾಯಿತು. ಶುಕ್ರವಾರದಂದು ಕಟೀಲು ಸಮೀಪದ ಹಲವು ಸಭಾಂಗಣಗಲ್ಲಿ ಮದುವೆ ಕಾರ್ಯಕ್ರಮಗಳು ಇದ್ದುದರಿಂದ ಕೆಲ ಜನರು ಸಭಾಂಗಣಗಳ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಹೆದ್ದಾರಿಯಂಚಿನಲ್ಲಿಯೇ ತಮ್ಮ ವಾಹನಗಳನ್ನು ಪಾರ್ಕ್ ಮಾಡಿದ್ದರು. ಬಜಪೆ ಪೊಲೀಸರು ಹಾಗೂ ದೇವಳದ ಭದ್ರತಾ ಸಿಬ್ಬಂದಿಗಳು ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕಟೀಲಿನ ಸೇತುವೆಯಿಂದ ಇಲ್ಲಿನ ಕಟೀಲು - ಉಳ್ಳಂಜೆ ಕ್ರಾಸ್ ತನಕ ಹೆದ್ದಾರಿಯು ತೀರ ಕಿರಿದಾಗಿದ್ದು,ಹೆದ್ದಾರಿ ಆಗಲೀಕರಣ ಗೊಳ್ಳಬೇಕಾಗಿದೆ.
ಕಿನ್ನಿಗೋಳಿಯ ರಾಜ್ಯ ಹೆದ್ದಾರಿಯಂಚಿನಲ್ಲಿ ಕೆಲವೊಂದು ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನಗಳ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.ಶುಕ್ರವಾರದಂದು ಕವತ್ತಾರು ಜಾತ್ರೆಗೆಂದು ಹೋಗುವ ಭಕ್ತರ ಸಂಖ್ಯೆ ಹೆಚ್ಚು ಇದ್ದುದರಿಂದ ಮೂಲ್ಕಿ - ಕಿನ್ನಿಗೋಳಿ - ಮೂರುಕಾವೇರಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಗೊಳಿಸಿದ್ದರು.