Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಾಸಕ ಡಾ.ಭರತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

ಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ  ಶಾಸಕ ಡಾ. ವೈ. ಭರತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಆರೋಗ್ಯ ಇಲಾಖೆಯ ವತಿಯಿಂದ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳು ವಿವರಣೆ ನೀಡಿದರು. ಆಯುಷ್ ಇಲಾಖೆಯು ಹೊಸ ಯೋಜನೆಗಳ ಜೊತೆಗೆ ಯೋಗ ಶಿಬಿರಗಳನ್ನು ಆಯೋಜಿಸುವ ಕುರಿತು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯು ಸಾವಯವ ಕೃಷಿ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿ, ಕೃಷಿ ಇಲಾಖೆಯು ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭಗಳಲ್ಲಿ ರೈತರಿಗೆ ವಿಮಾ ಪರಿಹಾರವನ್ನು ತ್ವರಿತವಾಗಿ ಪಾವತಿಸುವ ಕ್ರಮಗಳ ಬಗ್ಗೆ ಮಹತ್ವದ ಚರ್ಚೆಯು ಈ ವೇಳೆ ನಡೆಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳಿಗೆ ಬೇಕಾದಷ್ಟು ಹಾಸ್ಟೆಲ್ ಸೌಲಭ್ಯಗಳ ಕೊರತೆಯನ್ನು ಗಮನಿಸಿ, ಹೊಸ ಹಾಸ್ಟೆಲ್ ಆರಂಭಿಸಲು ಕೈಗೊಂಡಿರುವ ಕ್ರಮಗಳು ಹಾಗೂ ಪ್ರಸ್ತಾವನೆಗಳನ್ನು ವಿವರಿಸಿ, ಪಶುಸಂಗೋಪನಾ ಇಲಾಖೆಯು ರೇಬಿಸ್ ತಡೆಗಟ್ಟಲು ಚುಚ್ಚುಮದ್ದು ನೀಡುವ ಕಾರ್ಯಗಳು ಮತ್ತು ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಅರಣ್ಯ ಇಲಾಖೆಯು ಗ್ರಾಮ ಪ್ರದೇಶಗಳಿಗೆ ಬರುವ ಚಿರತೆಗಳ ಹಾವಳಿಯನ್ನು ತಡೆಗಟ್ಟಿ, ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಶಿಶು ಅಭಿವೃದ್ದಿ ಇಲಾಖೆಯು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ಒದಗಿಸಲು ಕೈಗೊಂಡಿರುವ ಪೂರಕ ಕ್ರಮಗಳನ್ನು ವಿವರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 10ನೇ ತರಗತಿ ವಿದ್ಯಾರ್ಥಿಗಳು ಸಾಧಿಸಿದ ಗಮನಾರ್ಹ ಫಲಿತಾಂಶಗಳನ್ನು ಶಾಸಕರು ಶ್ಲಾಘಿಸಿ, ಅದರ ಹಿಂದೆ ದುಡಿಯಿದ ಶಿಕ್ಷಕರ ಹಾಗೂ ಶಿಕ್ಷಣ ಇಲಾಖೆಯ ತಂಡದ ಪರಿಶ್ರಮವನ್ನು ಶಾಸಕರು ಈ ವೇಳೆ ಪ್ರಶಂಸಿಸಿದರು.

ಮೆಸ್ಕಂ ಇಲಾಖೆಗೆ ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಅಪಾಯಕಾರಿಯಾಗಿ ಮುರಿದು ಬೀಳುವ ಮರದ ಕೊಂಬೆಗಳನ್ನು ಮುಂಚಿತವಾಗಿ ಕತ್ತರಿಸಿ ನಿರ್ವಹಣೆ ಕೈಗೊಳ್ಳುವಂತೆ ಹಾಗೂ ನೀರಿನ ಪಂಪ್ ಸ್ಟೇಷನ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಒದಗಿಸಲು ಶಾಸಕರು ಸಭೆಯಲ್ಲಿ ಸೂಚಿಸಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬೇಸಿಗೆಯಲ್ಲಿ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಶಾಸಕರು ನಿರ್ದೇಶನ ನೀಡಿದರು.

ಈ ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಜನಹಿತದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ ಚರ್ಚಿಸಿದರು.