Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜ್ಞಾನದ ಬೆಳಕನ್ನು ಪ್ರತಿಯೊಬ್ಬರೂ ಮೈಗೂಡಿಸಿ - ಡಾ.ನಿಕೇತನ

ಬಜಪೆ:ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಎಕ್ಕಾರು ಗ್ರಾಮ ಶಾಖೆಯ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ. ಆರ್. ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣಾ ಕಾರ್ಯಕ್ರಮವು ಎ. 17  ರಂದು ಎಕ್ಕಾರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಿತು.ಸಾಹಿತಿ ಹಾಗೂ ಚಿಂತಕಿ ಡಾ. ನಿಕೇತನಾ ಉಡುಪಿ  ಅವರು ಡಾ.ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ "ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಂಬೇಡ್ಕರ್ ರವರ ಮೂರು ಸೂತ್ರಗಳನ್ನು ಸರಿಯಾಗಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅಂಬೇಡ್ಕರ್ ಅವರನ್ನು ಅನುಸರಿಸಿದಂತಾಗುತ್ತದೆ. ನಮ್ಮ ಸಂವಿಧಾನವು ಮನುಷ್ಯರನ್ನು ಮನುಷ್ಯರಾಗಿ ಗುರುತಿಸಿಕೊಂಡಿರುವುದರಿಂದಲೇ ಇಂದಿಗೂ ವಿಶ್ವ ಶ್ರೇಷ್ಠ ಸಂವಿಧಾನವಾಗಿ ವಿಶ್ವಮಾನ್ಯವಾಗಿದೆ.ಅಂಬೇಡ್ಕರ್ ರವರ ಜ್ಞಾನದ ಬೆಳಕನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಲ್ಲಿ ಮಾತ್ರ ಇಂದು ಪ್ರಪಂಚದಲ್ಲಿ ನಡೆಯುವ ಯುದ್ಧ ಭೀತಿ, ಸಂಘರ್ಷ, ಭಯೋತ್ಪಾದನೆ ಯಂತಹ ವಿನಾಶಕಾರಿ ಅಮಾನವೀಯ ಕ್ರೌರ್ಯಗಳನ್ನು ತಡೆಯಲು ಸಾಧ್ಯ. ಇದೆಲ್ಲಾ ಸಾಧ್ಯವಾಗುವುದು ನಾವೆಲ್ಲಾ ಮೌಲ್ಯಯುತ ಉನ್ನತ ಶಿಕ್ಷಣ ಪಡೆದಾಗ ಮಾತ್ರ. ಅಂಬೇಡ್ಕರ್ ರವರು ಧರ್ಮವನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಆದರೆ ಧರ್ಮದ ಹೆಸರಲ್ಲಿ ನಡೆಯುವ ಮೌಢ್ಯ, ಕಂದಾಚಾರ, ಮೋಸ, ವಂಚನೆ, ಸುಲಿಗೆ ಮುಂತಾದವುಗಳನ್ನು ಅತ್ಯಂತ ಕಠೋರವಾಗಿ ವಿರೋಧಿಸುತ್ತಿದ್ದರು ಮತ್ತು ಅವುಗಳನ್ನು ಪ್ರೋತ್ಸಾಹಿಸುವ ಧರ್ಮ ಅದು ಧರ್ಮವೇ ಅಲ್ಲ ಎಂದು ಪ್ರತಿಪಾದಿಸುತ್ತಿದ್ದರು ಎಂದರು.ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯ, ಹಕ್ಕುಗಳು, ಸ್ಥಾನಮಾನ, ಘನತೆಯ ವಿಚಾರವಾಗಿ ಅಂಬೇಡ್ಕರ್ ರವರು ವಿಶೇಷ ಕಾಳಜಿ ವಹಿಸಿ ನಮ್ಮ ಸಂವಿಧಾನದಲ್ಲಿ ಸಮಾನ ಅವಕಾಶ ನೀಡಿರುವುದರಿಂದಲೇ ಇಂದು ಮಹಿಳೆಯರು ರಿಕ್ಷಾದಿಂದ ಹಿಡಿದು ಆಂತರಿಕ್ಷಾದವರೆಗೆ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬ ಮಹಿಳೆಯರು ಅಂಬೇಡ್ಕರ್ ಅವರನ್ನು ಸ್ಮರಿಸಲೇ ಬೇಕಾಗಿದೆ ಎಂದರು.   
ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕ  ಎಚ್. ಏನ್. ಬಾಲಕೃಷ್ಣ ರವರು ಮಾತನಾಡಿ  ಅಂಬೇಡ್ಕರ್ ರವರ ಸಂವಿಧಾನದ ಕಾರಣದಿಂದಲೇ ಇಂದು ಶೋಷಿತ ಸಮುದಾಯವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರವೇಶ ಪಡೆದು ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಸಂವಿಧಾನದ ಪ್ರಕಾರ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು.ನಾವು ಕಾನೂನಿಗೆ ಗೌರವ ಕೊಟ್ಟರೆ ಸಂವಿಧಾನಕ್ಕೆ ಗೌರವ ಕೊಟ್ಟಂತೆ.ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಜಾಗೃತರಾಗಿ ಸಂವಿಧಾನದ ಆಶಯಗಳನ್ನು ಪಾಲಿಸುವ ಮೂಲಕ ಭಾರತವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಲು ಕಟ್ಟಿಬದ್ಧರಾಗಬೇಕೆಂದರು. 
 ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ(ತಿಮ್ಮ ಕಾವರು), DSS ಜಿಲ್ಲಾ ಸಂಚಾಲಕ  ಸದಾಶಿವ ಪಡುಬಿದ್ರಿ, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ  ಮೋನಪ್ಪ ಶೆಟ್ಟಿ ಎಕ್ಕಾರು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪೃರಸ್ಕೃತ ರೊನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ ,ಪರಿವರ್ತನಾ ಕೋ ಆಪರೇಟಿವ್ ಸೊಸೈಟಿ ಬಜ್ಪೆಯ ಅಧ್ಯಕ್ಷ  ಕೃಷ್ಣಾನಂದ. ಡಿ.,ಶೇಖರ್ ಶೆಟ್ಟಿ ತೆಂಕ ಎಕ್ಕಾರು, DSS ಮಂಗಳೂರು ತಾಲೂಕು ಸಂಚಾಲಕ ರವಿ ಪೇಜಾವರ, ದಲಿತ ನೌಕರರ ಒಕ್ಕೂಟದ ಜಿಲ್ಲಾ ಉಸ್ತುವಾರಿ ಎಚ್. ಡಿ. ಲೋಹಿತ್, ಗ್ರಾಮ ಮಹಿಳಾ ಸಂಚಾಲಕಿ ಸೌಮ್ಯ ಸುರೇಶ್, ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಮೊದಲಾದವರು
 ಉಪಸ್ಥಿತರಿದ್ದರು. 

ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಕ್ರಂ ಮಾಡ, ಧಾರ್ಮಿಕ ಕ್ಷೇತ್ರದಲ್ಲಿ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮ ಕಾವ ) ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ  ಸಾಧನೆಗೈದ ಸತೀಶ್ ಸಿದ್ಧಾರ್ಥ ನಗರ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. 

 SSLC ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ದೀಕ್ಷಿತ್ ತೆಂಕ ಎಕ್ಕಾರು , ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಧನ್ವಿತ್ ಕೆಂಚಗುಡ್ಡೆ,ಕೊರಗ ಸಮುದಾಯದ ಕೌನ್ಸಿಲರ್ ಕಿರಣ್ ಗುಂಡಾವ್ ಪದವು ಇವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಕೃಷ್ಣ. ಕೆ. ಎಕ್ಕಾರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ  ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಸನ್ನ ಶೆಟ್ಟಿ ಬೈಲೂರು ಸಾರಥ್ಯ ಹಾಗೂ ನಿರ್ದೇಶನದ ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರು ಹಾಸ್ಯಮಯ ತುಳು ನಾಟಕ ಪ್ರದರ್ಶನ ಗೊಂಡಿತು.