Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಕ್ಷಿಕೆರೆ: 45ನೇ ವಾರ್ಷಿಕ ದಫ್‌ ರಾತೀಬ್‌ ಸಮಾರೋಪ



ಹಳೆಯಂಗಡಿ: ಬದ್ರಿಯಾ ಜುಮಾ ಮಸೀದಿ (ರಿ) ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿ ಪಕ್ಷಿಕೆರೆ ಇದರ ವತಿಯಿಂದ ಆಯೋಜಿಸಲಾಗಿದ್ದ 45ನೇ ವಾರ್ಷಿಕ ಅರ್ರಿಫಾಯಿಯ್ಯ ದಫ್ ರಾತೀಬ್ ನ ಸಮಾರೋಪ ಸಮಾರಂಭವು ಶನಿವಾರ ಮಸೀದಿಯ ವಠಾರದಲ್ಲಿ ಜರುಗಿತು.

ಸಮಾರೋಪ ಸಮಾರಂಭವನ್ನು ಅಲ್‌ ಹಾಜ್‌ ಅಝ್‌ ಹರ್‌ ಫೈಝಿ ಬೊಳ್ಳೂರು ಉಸ್ತಾದ್‌ ಉದ್ಘಾಟಿಸಿದರು. ಚೊಕ್ಕಬೆಟ್ಟು ಜುಮ ಮಸೀದಿಯ ಖತೀಬ್‌ ಅಬ್ದುಲ್‌ ಅಝೀಝ್‌ ದಾರಿಮಿ ಅವರು ಮತಪ್ರಭಾಷಣಗೈದರು. ಅಸ್ಸಯ್ಯಿದ್ ಝೈನುಲ್‌ ಆಬಿದೀನ್‌ ಜಮಲುಲೈಲಿ ತಂಙಳ್‌ ಕಾಜೂರು ದುಆ ಆಶೀರ್ವಚನ ಗೈದರು.

ಸಮಾರೋಪ ಸಮಾರಂಭಕ್ಕೂ ಮುನ್ನ ಅಸರ್‌ ನಮಾಝ್‌ನ ಬಳಿಕ ದಫ್‌ ಉಸ್ತಾದ್‌ ಡಾ. ಎಂ.ಬಿ. ಮುಹಮ್ಮದ್‌ ಹಾಗೂ ಹಮ್ಮಬ್ಬ ಪಕ್ಷಿಕೆರೆ ಅವರ ನೇತೃತ್ವದಲ್ಲಿ ವಾರ್ಷಿಕ ದಫ್‌ ರಾತೀಬ್‌ ನಡೆಯಿತು. ಮಗ್ರಿಬ್‌ ನಮಾಝ್‌ನ ಬಳಿಕ ಬಶೀರ್‌ ಅಲ್‌ ಫುರ್ಖಾನಿ ಮಜೂರು ಇವರ ನೇತೃತ್ವದಲ್ಲಿ ಬೃಹತ್‌ ಸಂದರಲ್‌ ಮೆರವಣಿಗೆ ನಡೆಯಿತು.                                           

ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಕೆ.ಯು. ಮುಹಮ್ಮದ್‌ ಹಾಜಿ ನೂರಾನಿಯಾ ವಹಿಸಿದ್ದರು. ಖತೀಬರಾದ ಮುಹಮ್ಮದ್‌ ಹನೀಫ್‌ ಅಲ್‌ ಖಾಸಿಮಿ ಅವರು ಸ್ವಾಗತ ಭಾಷಣಗೈದರು. ಇದೇ ವೇಳೆ ಜಮಾಅತ್‌ನ ಹಿರಿಯರಾದ ಎಂ.ಕೆ. ಕೋಯಾಲಿ ಹಾಗೂ ಮಸೀದಿಗೆ ಸಹಾಯ- ಸಹಕಾರ ನೀಡುತ್ತಿರುವ ಸ್ಥಳೀಯ ಹಿಂದೂ ಧರ್ಮೀಯ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಸಮಾರಂಭದಲ್ಲಿ ಉಸ್ತಾದರಾದ ಮುಹಮ್ಮದ್‌ ಸಫ್ವಾನ್ ಹನೀಫಿ, ಅಬ್ದುಲ್‌ ರಶೀದ್ ಮುಸ್ಲಿಯಾರ್, ಮುಜೀಬ್ ಮುಸ್ಲಿಯಾರ್, ಮುಹಮ್ಮದ್‌ ಶರೀಫ್ ಹನೀಫಿ, ಮುಹಮ್ಮದ್‌ ಮನ್ಸೂರ್ ಸಅದಿ, ಬದ್ರಿಯಾ ಜುಮಾ ಮಸೀದಿ (ರಿ) ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಇಸ್ಮಾಯೀಲ್‌ ಕೋಕೈಗುಡ್ಡೆ, ಉಪಾಧ್ಯಕ್ಷರಾದ ಪಿ.ಬಿ. ಅಬ್ದುಲ್‌ ಖಾದರ್‌, ತೌಫೀಕ್‌ ಮೊಯ್ದೀನ್‌ ಬಾವಾ, ಹಾಜಿ ಪಲ್ಲಿಕುಟ್ಟಿ, ಇ.ಕೆ. ಅಬ್ದುಲ್‌ ಹಮೀದ್‌ ಮೊದಲಾದವರು ಉಪಸ್ಥಿತರಿದ್ದರು.