Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಭೂಮಿ ವಶ,ಸಭೆಯಲ್ಲಿ ಭೂಮಿ ಕಳೆದುಕೊಂಡವರ ಆಕ್ರೋಶ

ಕಿನ್ನಿಗೋಳಿ :2022 ರ ಜನವರಿಯಲ್ಲಿ  ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಉಳೆಪಾಡಿ, ಬಳ್ಕುಂಜೆ, ಕೊಲ್ಲೂರಿನ ಸುಮಾರು 1097 ಎಕ್ರೆ ಜಮೀನನ್ನು ಕೈಗಾರಿಕಾ ವಸಾಹತು ನಿರ್ಮಿಸಲು ವಶಪಡಿಸಿಕೊಳ್ಳುವ ಉದ್ದೇಶದಿಂದ ಪ್ರಚಾರ ನೀಡಿ ಈ ಪ್ರದೇಶದ ಸುಮಾರು 850 ಎಕ್ರೆ ಜಮೀನುಗಳನ್ನು ಸ್ವ  ಇಚ್ಛೆಯಿಂದ ಕೆ.ಐ.ಡಿ.ಬಿ ಗೆ ಭೂಮಾಲಕರು ನೀಡಿರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಹಲವು ಬಾರಿ ಸರ್ವೆ ನಡೆಸಿದ ಕೆ. ಐ.ಡಿ.ಬಿ.ಯು ಸ್ಥಳೀಯರಿಗೆ ಸ್ವಷ್ಟವಾದ ಮಾಹಿತಿ ನೀಡದೆ ಇದೀಗ ಒಮ್ಮಿಂದೊಮ್ಮೆಲೇ ಬಳ್ಕುಂಜೆ ಪ್ರದೇಶದ 350 ಎಕ್ರೆ ಜಮೀನು ಮಾತ್ರ ಕೆ. ಐ.ಡಿ.ಬಿ.ಗೆ ಯೋಗ್ಯವಾಗಿದ್ದು ಉಳಿದಂತೆ ಉಳೆ ಪಾಡಿ, ಕೊಲ್ಲೂರು ಭೂಮಿಗಳು ಕೈಗಾರಿಕೆಗೆ ಯೋಗ್ಯವಲ್ಲ ಎಂದು ಏಕ ಪಕ್ಷೀಯ  ತೀರ್ಮಾನ ನಡೆಸಿದೆ  ಎಂದು ವರದಿಗಳಿದ್ದು ಈ ಕುರಿತು ಉಳೆಪಾಡಿ ಗ್ರಾಮದ ಭೂಮಿ ನೀಡಿದವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ಕಳೆದ ನಾಲ್ಕು ವರ್ಷಗಳಿಂದ ಭೂಮಿಯ ಮೇಲೆ ಸಾಲ ಸೌಲಭ್ಯ,ಪರವಾನಿಗಳಿಗೆ. ತಮ್ಮ ಜಮೀನುಗಳನ್ನು ಬಳಸಲಾಗದೆ ಮನೆ ಇತ್ಯಾದಿಗಳನ್ನು ರಿಪೇರಿ ಮಾಡಲಾಗದೆ ತೀವ್ರ ತೊಂದರೆಗೊಳಪಟ್ಟ ನಾವು ಈ ರೀತಿಯ ಶೋಷಣೆಗೆ ಒಳಗಾಗಲು ಯಾರು ಕಾರಣ? ಇದರ ಹಿಂದಿನ ಶಕುನಿಗಳಾರು? ಎಂದು ಸೂಕ್ತ ತನಿಖೆ  ನಡೆಸಿ ಸರಕಾರ ತಮಗೆ ನ್ಯಾಯ ಒದಗಿಸಬೇಕೆಂದು  ಭೂಮಿ ನೀಡಿದವರು ಆಗ್ರಹಿಸಿದರು. 

ಧರ್ಮದರ್ಶಿ ಮೋಹನದಾಸ ಸುರತ್ಕಲ್‌ರವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು.  ಸಭೆಯಲ್ಲಿ ಪ್ರಸಾದ ಅಜಿಲ ಬಳ್ಕುಂಜೆ, ಲಾರೆನ್ಸ್  ಲೂಯಿಸ್, ರವಿ ಪೂಜಾರಿ ಬಳ್ಕುಂಜೆ, ಜೋಸೆಫ್ ಅರಾನ್ಹ, ವಿನ್ಸೆಂಟ್ ಲೂಯಿಸ್, ಮಹಮ್ಮದ್ ಸಾಬ್, ಉಷಾ ಆನಂದ, ಭಾಸ್ಕರ ಆಚಾರಿ ಮೊದಲಾದವರು  ಉಪಸ್ಥಿತರಿದ್ದರು. ವಿಲ್ಮಾ ಲೂಯಿಸ್ ವಂದಿಸಿದರು.