ಕಟೀಲು ವರ್ಷಾವಧಿ ಜಾತ್ರೆ ಸಂಪನ್ನ
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಮಹಾ ರಥೋತ್ಸವ , ಅತ್ತೂರು ಹಾಗೂ ಕೊಡೆತ್ತೂರು ಮಾಗಣೆಯ ಭಕ್ತರಿಂದ ತೂಟೆದಾರ ಸೇವೆಯು ನಡೆಯಿತು. ಬೆಳಿಗ್ಗೆ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಕವಾಟೋದ್ಘಾಟನೆ, ಭಕ್ತಾದಿಗಳಿಗೆ ಶ್ರೀದೇವಿಯ ಶಯನೋತ್ಸವದ ಮಲ್ಲಿಗೆ ಪ್ರಸಾದ ವಿತರಣೆ,ತುಲಾಭಾರ ಸೇವೆ,ಅಭಿಷೇಕಸೇವೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀದೇವರ ಯಾತ್ರಾ ಬಲಿ ಹೊರಟು ವಸಂತ ಪೂಜೆ ಓಕುಳಿ ಪೂಜೆ ಬಳಿಕ ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀದೇವರ ಎಕ್ಕಾರು ಸವಾರಿ,ಎಕ್ಕಾರಿನಿಂದ ಕಟೀಲಿನ ತನಕ ಅಲ್ಲಲ್ಲಿ ಕಟ್ಟೆಗಳಲ್ಲಿ ಕಟ್ಟೆ ಪೂಜೆ ನಡೆಯಿತು.
ಬಳಿಕ ಶ್ರೀ ದೇವರ ಮಹಾರಥೋತ್ಸವ, ಆಜಾರಿನ ಮೈದಾನ ಹಾಗೂ ಕಟೀಲಿನ ರಥಬೀದಿಯಲ್ಲಿ ಅತ್ತೂರು ಹಾಗೂ ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆಯು ನಡೆಯಿತು.
ಬಳಿಕ ಶ್ರೀ ದೇವರ ಹಾಗೂ ಕೊಡಮಣಿತ್ತಾಯ ದೈವದ ಭೇಟಿ, ಧ್ವಜಾವರೋಹಣ, ಕೊಡಮಣಿತ್ತಾಯ ದೈವದ ನೇಮೋತ್ಸವದೊಂದಿಗೆ ಕಟೀಲು ವರ್ಷಾವಧಿ ಜಾತ್ರೆಯು ಸಂಪನ್ನಗೊಂಡಿತು.