ನಾಳೆ ಗುರುಪುರ ಮೂಳೂರು - ಅಡ್ಡೂರು ಜೋಡುಕರೆ ಕಂಬಳ
ಗುರುಪುರ: ಇಲ್ಲಿನ ಮಾಣಿಬೆಟ್ಟುಗುತ್ತುವಿನ ಎದುರಿನ ಗದ್ದೆಯಲ್ಲಿ ನಾಳೆ (ಶನಿವಾರ 4) 3 ನೇ ವರ್ಷದ ಹೊನಲು ಬೆಳಕಿನ ಮೂಳೂರು- ಅಡ್ಡೂರು ಜೋಡುಕರೆ ಗುರುಪುರ ಕಂಬಳೋತ್ಸವವು ಕಂಬಳ ಸಮಿತಿಯ ಅಧ್ಯಕ್ಷರಾದ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ 8:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,ಮಂಗಳೂರು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಂಬಳವನ್ನು ಉದ್ಘಾಟಿಸಲಿದ್ದು ,ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ದೀಪಪ್ರಜ್ವಲನೆಗೊಳಿಸಲಿದ್ದಾರೆ.ಮೂಳೂರು - ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಆಲಿಯವರು ಕಾರ್ಯಕ್ರಮದ ಸಭಾಧ್ಯಕ್ಷೆ ವಹಿಸಲಿದ್ದಾರೆ.ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳಾದ ಜಿ.ಟಿ ವಾಸುದೇವ ಭಟ್,ಗುರುಪುರ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ್ ಶೆಟ್ಟಿ,ಕೊಡೆತ್ತೂರು ಗುತ್ತಿನ ಗುತ್ತಿನಾರ್ ನಿತಿನ್ ಶೆಟ್ಟಿ,ಶಶಿಧರ್ ಭಟ್ ಬೊಳ್ಮಾರಗುತ್ತು,ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ,ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ರಘುಶೆಟ್ಟಿ ಹಾಗೂ ಗಣ್ಯಾತೀಗಣ್ಯರು ಉಪಸ್ಥಿತಲಿರುವರು.
ಸಂಜೆ 5:30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಂಸದ ಹಾಗೂ ಬಮೂಲ್ ಬೆಂಗಳೂರು ಅಧ್ಯಕ್ಷ ಡಿಕೆ ಸುರೇಶ್ ಉದ್ಘಾಟಿಸಲಿರುವರು. ವಿಧಾನಸಭೆಯ ಸಭಾಧ್ಯಕ್ಷ ಯುಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹಿರಿಯ ನಾಯಕರಾದ ಬಿ. ರಮಾನಾಥ ರೈ, ಮಂಜುನಾಥ ಭಂಡಾರಿ, ವಿನಯ ಕುಮಾರ್ ಸೊರಕೆ, ಐವನ್ ಡಿಸೋಜಾ,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವಾರು ರಾಜಕೀಯ ಸಾಮಾಜಿಕ ನಾಯಕರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಲನಚಿತ್ರ ಕಲಾವಿದರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು.