Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸಬೆಟ್ಟು ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಮಂಗಳೂರು :ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸಬೆಟ್ಟು ವಾರ್ಡಿನ ಒಟ್ಟು 107 ವಿವಿಧ ರಸ್ತೆಗಳಿಗೆ ರಸ್ತೆ ನಾಮಫಲಕಗಳನ್ನು ಅಳವಡಿಸುವುದರ ಜೊತೆಗೆ ಸಿಸಿ ಕ್ಯಾಮೆರಾಗಳನ್ನು (CC Camera) ಸ್ಥಾಪಿಸುವ ಮಹತ್ವದ ಯೋಜನೆಗೆ ರೂ. 39 ಲಕ್ಷ ಅನುದಾನವನ್ನು  ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗಿದ್ದು, ಯೋಜನೆಯ ಉದ್ಘಾಟನೆಯನ್ನು  ಶಾಸಕ ಡಾ.ಭರತ್ ಶೆಟ್ಟಿಯವರು  ನೆರವೇರಿಸಿದರು. ಈ ಸಂದರ್ಭ, ಸ್ಥಳೀಯ ನಿಕಟ ಪೂರ್ವ ಮಹಾನಗರ ಪಾಲಿಕೆ ಸದಸ್ಯ  ವರುಣ್ ಚೌಟ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ದೇಶದಲ್ಲೇ ಪ್ರಪ್ರಥಮ ಬಾರಿಗೆ ಒಂದೇ ವಾರ್ಡಿನಲ್ಲಿ 107 ಸಿಸಿ ಕ್ಯಾಮೆರಾಗಳನ್ನು ಹಾಗೂ ರಸ್ತೆ ನಾಮಫಲಕಗಳನ್ನು ಅಳವಡಿಸುವ ವಿಶಿಷ್ಟ ಯೋಜನೆ ಇದಾಗಿದೆ. ಅಳವಡಿಸಲಾದ ಸಿಸಿ ಕ್ಯಾಮೆರಾಗಳ ಸಂಪರ್ಕ (Link) ಅನ್ನು ಸ್ಥಳೀಯ ಕಾಲೋನಿಗಳ ಪ್ರತಿನಿಧಿಗಳಿಗೆ ನೀಡಲಾಗುತ್ತದೆ. ಎಲ್ಲಾ 107 ಕ್ಯಾಮೆರಾಗಳ ನಿಯಂತ್ರಣ ವ್ಯವಸ್ಥೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುತ್ತದೆ. ಈ ಸಿಸಿ ಕ್ಯಾಮೆರಾಗಳಲ್ಲಿ ಧ್ವನಿ ದಾಖಲಿಸುವ ವ್ಯವಸ್ಥೆ (Voice Recorder) ಸಹ ಇದೆ. ಇದರೊಂದಿಗೆ, ಇಂಗ್ಲಿಷ್, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ರಸ್ತೆ ನಾಮಫಲಕಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ, ಪ್ರತಿಯೊಂದು ನಾಮಫಲಕದಲ್ಲೂ ಕ್ಯೂಆರ್ ಕೋಡ್ (QR Code) ವ್ಯವಸ್ಥೆ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದಾಗ ಹೊಸಬೆಟ್ಟು ವಾರ್ಡಿನ ಸಂಪೂರ್ಣ ಮಾಹಿತಿಗಳು ಲಭ್ಯವಾಗುತ್ತವೆ.

ಇದಲ್ಲದೆ, ಅಗತ್ಯವಿರುವ ಸಾರ್ವಜನಿಕರಿಗೆ—ಉದಾಹರಣೆಗೆ ಆಟೋ ಚಾಲಕರು, ಪೈಂಟರ್‌ಗಳು, ಪ್ಲಂಬರ್‌ಗಳು, ಆಂಬುಲೆನ್ಸ್ ಸೇವೆ, ಟ್ಯಾಕ್ಸಿ ಚಾಲಕರು, ಪೊಲೀಸ್ ಠಾಣೆ ಹಾಗೂ ಇತರ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳ ಮಾಹಿತಿಯೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.