ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದಲ್ಲಿ ಮಾ.4 ರಿಂದ ಮಾ.8 ರ ತನಕ ಬ್ರಹ್ಮಕಲಶದ ಸಂಭ್ರಮ
Sunday, March 1, 2026
ಹಳೆಯಂಗಡಿ:ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲುವಿನಲ್ಲಿ ಮಾ.4 ರಿಂದ ಮಾ.8 ರ ತನಕ ಸಪರಿವಾರ ಶ್ರೀ ಭಗವತೀ ಅಮ್ಮನವರಿಗೆ ಬ್ರಹ್ಮಕಲಶೋತ್ಸವವು ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಸಸಿಹಿತ್ಲು ದೇವಳದ ದಿವ್ಯಾಮೃತ ಭೋಜನ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವಿದ್ವಾನ್ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಹಾಗೂ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ರವರ ನೇತೃತ್ವದಲ್ಲಿ ವೇದಮೂರ್ತಿ ವೆಂಕಟೇಶ ತಂತ್ರಿ ಎಡಪದವು ಇವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು,ಮಾ.4 ರಂದು ಬೆಳಿಗ್ಗೆ ಉಗ್ರಾಣಮುಹೂರ್ತ ,ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಮುಕ್ಕ ಮೂಲಕ ಸಸಿಹಿತ್ಲು ದೇವಳಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಭವ್ಯ ಮೆರವಣಿಗೆಯು ನಡೆಯಲಿದೆ ಎಂದರು.
ಕ್ಷೇತ್ರದಲ್ಲಿ ಈಗಾಗಲೇ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆದಿದ್ದು,ಸುಮಾರು 50 ಲ.ರೂ ವೆಚ್ಚದಲ್ಲಿ ದೇವಸ್ಥಾನದ ಸುತ್ತಲೂ ಇಂಟರ್ ಲಾಕ್ ಆಳವಡಿಕೆ,ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಸುಮಾರು 20 ಲ.ರೂ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ,ಶಾಸಕ ಉಮಾನಾಥ ಕೋಟ್ಯಾನ್ ರವರ ವತಿಯಿಂದ 10 ಲ ರೂ ವೆಚ್ಚದಲ್ಲಿ ಹಳೆಯಂಗಡಿಯಿಂದ ಸಸಿಹಿತ್ಲು ತನಕ ರಸ್ತೆ ಡಾಮರೀಕರಣ,ಹಳೆಯಂಗಡಿ ಗ್ರಾ.ಪಂ ವತಿಯಿಂದ 4 ಲ.ರೂ ವೆಚ್ಚದಲ್ಲಿ ಚರಂಡಿ ದುರಸ್ಥಿ ಹಾಗೂ 1.5 ಲ ರೂ ವೆಚ್ಚದಲ್ಲಿ ಹೈಮಾಸ್ಟ್ ದೀಪ ಆಳವಡಿಕೆ,ದಾನಿಗಳ ನೆರವಿನಿಂದ ಸುಮಾರು 75 ಲ.ರೂ ವೆಚ್ಚದಲ್ಲಿ ದೇವಳದ ಎರಡು ಪ್ರಧಾನ ಗೋಪುರಗಳ ಪುನರ್ ನವೀಕರಣ,30 ಲ.ರೂ ವೆಚ್ಚದಲ್ಲಿ ದೇವಸ್ಥಾನದ ಗರ್ಭಗುಡಿ,ಧ್ವಜಸ್ತಂಭ ಹಾಗೂ ಹೂ ಹಾಕುವ ಕಲ್ಲುಗಳಿಗೆ ತಾಮ್ರದ ಹೊದಿಕೆ ,40 ಲ.ರೂ ವೆಚ್ಚದಲ್ಲಿ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳಿಗೆ ಬೆಳ್ಳಿಯ ಹೊದಿಕೆ ಆಳವಡಿಕೆ,50 ಲ.ರೂ ವೆಚ್ಚದಲ್ಲಿ ಖ್ಯಾತ ಶಿಲ್ಪಿ ಸುಧಾಕರ್ ಶಿವಮೊಗ್ಗ ರವರ ನೇತೃತ್ವದಲ್ಲಿ ದೇವಸ್ಥಾನದ ಹೊರಾಂಗಣ ಒಳಾಂಗಣ ಸುತ್ತು ಪೌಳಿಗಳಿಗೆ ನೂತನ ವಿನ್ಯಾಸದ ಕಾರ್ನಿಷ್ ಕೆಲಸದ ಜೊತೆಗೆ 20 ವಿವಿಧ ದೇವರುಗಳ ಮೂರ್ತಿ ರಚನೆ,ಸುಮಾರು 15 ಲ.ರೂ ವೆಚ್ಚದಲ್ಲಿ ದೇವಳದ ಒಳಾಂಗಣ ಗೊಡೆಗಳಿಗೆ ಗ್ರಾನೈಟ್ ಆಳವಡಿಕೆ,50 ಲ.ರೂ ವೆಚ್ಚದಲ್ಲಿ ದೇವಳದ ಸುತ್ತಲೂ ಆವರಣ ಗೋಡೆ ನಿರ್ಮಾಣ,ದೇವಸ್ಥಾನ ,ಅನ್ನ ಛತ್ರ ಹಾಗೂ ಸುತ್ತಲಿನ ಕಂಪೌಂಡ್ ಗಳಿಗೆ ಬಣ್ಣದ ಕೆಲಸ ಹಾಗೂ 12 ವರ್ಷದ ನಂತರ ದೇವಸ್ಥಾನದ ಒಳಗಿನ ಮರಳು ಬದಲಾವಣೆ ಕಾರ್ಯವು ಕರ ಸೇವೆಯ ಮೂಲಕ ನಡೆದಿದೆ ಎಂದು ಅವರು ಹೇಳಿದರು.
ಪ್ಲಾಸ್ಟಿಕ್ ಮುಕ್ತ ಬ್ರಹ್ಮಕಲಶೋತ್ಸವಕ್ಕೆ ಆದ್ಯತೆಯನ್ನು ನೀಡಲಾಗಿದೆ.ಮಕ್ಕಳಿಗಾಗಿ ಆಟೋಟ ಚಟುವಟಿಕೆಗಳು,ಬೀಚ್ ಬದಿಯಲ್ಲಿ ವ್ಯಾಪಾರ ಮಳಿಗೆಗಳು,10 ಎಕ್ರೆ ಪ್ರದೇಶದಲ್ಲಿ ವಿಶಾಲ ಪಾರ್ಕಿಂಗ್,ಅವಶ್ಯಕ ಇರುವವರಿಗೆ ದೇವರ ದರ್ಶನಕ್ಕೆ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಮಾ.6 ರಂದು ಬೆಳಿಗ್ಗೆ ಆಯುತ ಕದಳಿಯಾಗ,ಸಂಜೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚಣೆ, ಮಾ.8 ರಂದು ಸಂಜೆ ಚಕ್ರವರ್ತಿ ಸೂಲಿಬೆಲೆಯವರ ಮುಂದಾಳತ್ವದಲ್ಲಿ ಕಡಲ ಮಾತೆಗೆ ಗಂಗಾರತಿ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ,ಧಾರ್ಮಿಕ ಹಾಗೂ ಪೌರಾಣಿಕ ಕಥೆಗಳನ್ನೊಳಗೊಂಡ ನಾಟಕ ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿದಿನ ಭಕ್ತರಿಗೆ ಬೆಳಿಗ್ಗೆ ಹಾಗೂ ಸಂಜೆ ಉಪಾಹಾರ ,ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಇದೆ
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ ಅವರು ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ ಸಸಿಹಿತ್ಲುವಿನಲ್ಲಿ 1995 ಮತ್ತು 2014 ರಲ್ಲಿ ಯಶಸ್ವಿಯಾಗಿ ಬ್ರಹ್ಮಕಲಶೋತ್ಸವವು ನಡೆದಿದ್ದು,2026 ರಲ್ಲಿ ನಡೆಯುತ್ತಿರುವುದು 3 ನೇ ಬ್ರಹ್ಮಕಲಶೋತ್ಸವವಾಗಿದೆ. 2 ಲಕ್ಷ ಭಕ್ತರು ಆಗಮನದ ನೀರಿಕ್ಷೆಇದೆ.ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕರಾದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ಕರಿತೋಟ, ಕೋಶಾಧಿಕಾರಿ ಸುರೇಶ್ ಬಂಗೇರ, ಮಾತೃ ಮಂಡಳಿ ಅಧ್ಯಕ್ಷೆ ಕಸ್ತೂರಿ ಪಂಜ, ಸಮಿತಿಯ ಉಪಾಧ್ಯಕ್ಷ ಉದಯ ಸುವರ್ಣ ಸಸಿಹಿತ್ಲು ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಉಪಾಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಸ್ವಾಗತಿಸಿದರು.