ಪ್ರಸೂತಿ ತಜ್ಞೆ, ಕೃಷಿಕೆ ಜಯಂತಿ ಶೆಟ್ಟಿಗಾರ್ ಕೆರೆಕಾಡು ನಿಧನ
ಮೂಲ್ಕಿ : ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಮನೆ ಮದ್ದಿನ ಮೂಲಕ ಪ್ರಸಿದ್ಧರಾಗಿದ್ದ ಮೂಲ್ಕಿ ಬಳಿಯ ಕೆರೆಕಾಡು ನಿವಾಸಿ ಜನಾರ್ದನ ಶೆಟ್ಟಿಗಾರ್ ಅವರ ಧರ್ಮಪತ್ನಿ ಶ್ರೀಮತಿ ಜಯಂತಿ ಶೆಟ್ಟಿಗಾರ್ (65) ಅವರು ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಮಾ.11ರಂದು ನಿಧನರಾದರು.
ಪ್ರಸೂತಿ ತಜ್ಞರಾಗಿ ನೂರಾರು ಹೆಣ್ಣುಮಕ್ಕಳ ಹೆರಿಗೆಯನ್ನು ಸುಸೂತ್ರವಾಗಿ ನಡೆಸಿ ಅವರ ಭವಿಷ್ಯದ ಕರುಳಕುಡಿಯನ್ನು ಭೂಮಿಗೆ ತರಲು ತಮ್ಮ ಸೇವಾ ಮನೋಭಾವನೆಯಿಂದ ಪ್ರಸಿದ್ಧರಾಗಿ, ಕೆರೆಕಾಡಿನ ಜಯಂತಕ್ಕ ಎಂದೇ ಮನೆಮಾತಾಗಿದ್ದ ಅವರು ಕೃಷಿ ಚಟುವಟಿಕೆಗೆ ಪೂರಕವಾಗಿ ಕೆಲಸದವರನ್ನು ಸಂಘಟಿಸಿ, ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಕೆರೆಕಾಡಿನ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಹಿಳಾ ವಿಭಾಗದಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಕಿಸುತ್ತಿದ್ದರು. ಕೆರೆಕಾಡು ಭಾಗ್ಯಲಕ್ಷ್ಮೀ ಸ್ರ್ತೀ ಶಕ್ತಿ ಸಂಘದಲ್ಲಿ ಸಕ್ರೀಯರಾಗಿದ್ದರು.
ಪತಿ ಜನಾರ್ದನ್ ಶೆಟ್ಟಿಗಾರ್ ಮತ್ತು ಪ್ರಸಿದ್ಧ ರಂಗಭೂಮಿ, ಸಿನಿಮಾ ಕಲಾವಿದರಾದ ಸುರೇಶ್ ಶೆಟ್ಟಿಗಾರ್ ಹಾಗೂ ಹರೀಶ್ ಪದ್ಮಶಾಲಿ, ಹೋಟೆಲ್ ಉದ್ಯಮಿ ದಿನೇಶ್ ಶೆಟ್ಟಿಗಾರ್ ಹಾಗೂ ಇಬ್ಬರು ಪುತ್ರಿಯರನ್ನು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.