ಕಟೀಲು ರಕ್ತೇಶ್ವರೀ ಗುಡಿಯಲ್ಲಿ ತೋರಣ ಮುಹೂರ್ತ,ಏ.2 ರಂದು ಬ್ರಹ್ಮಕಲಶಾಭಿಷೇಕ
Tuesday, March 31, 2026
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವರ ಪರಿವಾರ ದೇವತೆಯಾದ ಶ್ರೀ ರಕ್ತೇಶ್ವರೀ ಗುಡಿಯನ್ನು ಬರೋಡ ಶಶಿಧರ ಶೆಟ್ಟಿ ಸೇವಾರೂಪದಲ್ಲಿ ಸುಮಾರು ರೂ.90ಲಕ್ಷ ವೆಚ್ಚದಲ್ಲಿ ನವೀಕರಿಸಿ ನೀಡಿದ್ದು, ಇಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಕಲಶಾಭಿಷೇಕ ಏಪ್ರಿಲ್ 2 ರ ಗುರುವಾರ ನಡೆಯಲಿದೆ.
ದೇಗುಲದ ತಂತ್ರಿಗಳಾದ ವೇದವ್ಯಾಸ ತಂತ್ರಿ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ದಾನಿಗಳಾದ ಬರೋಡ ಶಶಿಧರ ಶೆಟ್ಟಿ ದಂಪತಿಗಳು, ಪ್ರದ್ಯುಮ್ನ ರಾವ್ ಶಿಬರೂರು ಮುಂತಾದವರಿದ್ದರು.ನಾಳೆ
ಪ್ರಾಯಶ್ಚಿತ್ತ ಹೋಮಾದಿಗಳು, ರಕ್ತೇಶ್ವರಿಯ ಅಧಿವಾಸಹೋಮ, ಶಕ್ತಿದಂಡಕ ಮಂಡಲ ಪೂಜೆ, ತಾ. 2 ರ ಬೆಳಿಗ್ಗೆ ಕಲಶಾಧಿವಾಸ, ದುರ್ಗಾಹೋಮ, ರಕ್ತೇಶ್ವರೀ ದೇವಿಯ ಪ್ರತಿಷ್ಠೆ, ಬೆಳಿಗ್ಗೆ 11 ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಎಂಆರ್‌ಜಿ ಸಮೂಹ ಸಂಸ್ಥೆಗಳ ಡಾ.ಕೆ.ಪ್ರಕಾಶ್ ಶೆಟ್ಟಿ, ಡಾ. ಮೋಹನ ಆಳ್ವ, ಪುಣೆಯ ಸಂತೋಷ್‌ಕುಮಾರ್ ಶೆಟ್ಟಿ, ಕಾರ್ಕಳ ಡಾ.ಸುಧಾಕರ ಶೆಟ್ಟಿ, ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಹರೀಶ್ ಪೂಂಜ, ನಳಿನ್ ಕುಮಾರ್ ಕಟೀಲ್ , ಅಭಯಚಂದ್ರ ಜೈನ್ ಮುಂತಾದವರು ಭಾಗವಹಿಸಲಿದ್ದಾರೆ.
ಎಲ್ಲ ಮುತ್ತೈದೆಯರಿಗೆ ಸೀರೆ
ಈ ಸಂದರ್ಭ ಬಂದಂತಹ ಎಲ್ಲ ಮುತ್ತೈದೆಯವರಿಗೆ ಸುಹಾಸಿನಿ ಪೂಜೆಯೆಂಬ ಸಂಕಲ್ಪದಲ್ಲಿ ಸೀರೆಯನ್ನು ನೀಡಲಾಗುವುದು ಎಂದು ದೇಗುಲದ ಪ್ರಕಟನೆ ತಿಳಿಸಿದೆ.