ಔಷಧೀಯ ಸಸ್ಯಗಳು ನಮ್ಮ ಆರೋಗ್ಯದ ರಕ್ಷಕರು - ರಮ್ಯಾ .ಕೆ
Saturday, March 7, 2026
ಬಜಪೆ:ಭಾರತವು ಔಷಧೀಯ ಸಸ್ಯಗಳ ಸಮೃದ್ಧ ನಾಡಾಗಿದೆ. ಪುರಾತನ ಕಾಲದಿಂದಲೂ ಆಯುರ್ವೇದ ಮತ್ತು ಸಿದ್ಧ ವೈದ್ಯಕೀಯ ಪದ್ಧತಿಗಳಲ್ಲಿ ಸಸ್ಯಗಳನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹಲವಾರು ರೋಗಗಳಿಗೆ ಸಸ್ಯಾಧಾರಿತ ಚಿಕಿತ್ಸೆ ಸಾಮಾನ್ಯವಾಗಿದೆ. ಔಷಧೀಯ ಸಸ್ಯಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಈ ಬಗ್ಗೆ ನೀಡಿರುವ ಚಟುವಟಿಕೆಯು ಬಹಳ ಪ್ರಸ್ತುತವಾಗಿದೆ ಎಂದು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಇಂದಿರಾ ಎನ್ ರಾವ್ ಹೇಳಿದರು. ಅವರು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿನ ವನಸಿರಿ ಇಕೋ ಕ್ಲಬ್ ವತಿಯಿಂದ ವಿಶ್ವ ವನ್ಯಜೀವಿ ದಿನಾಚರಣೆಯ ಅಂಗವಾಗಿ "ವಿಶ್ವ ವನ್ಯಪ್ರಾಣಿ ದಿನ ಮತ್ತು ಔಷಧಿಯ ಸಸ್ಯಗಳ ಸಂರಕ್ಷಣೆ " ಶೀರ್ಷಿಕೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಕೋ ಕ್ಲಬ್ ನ ಸಂಚಾಲಕಿ ರಮ್ಯಾ ಕೆ ಮಾತನಾಡಿ ಔಷಧೀಯ ಸಸ್ಯಗಳು ನಮ್ಮ ಆರೋಗ್ಯದ ರಕ್ಷಕರಾಗಿವೆ. ವನ್ಯಜೀವಿ ಮತ್ತು ಔಷಧೀಯ ಸಸ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ರಕ್ಷಿಸಿದರೆ ಇನ್ನೊಂದು ಸಹಜವಾಗಿ ರಕ್ಷಿತವಾಗುತ್ತದೆ. ಪ್ರಕೃತಿಯನ್ನು ಕಾಪಾಡುವುದು ನಮ್ಮ ಸಂಯುಕ್ತ ಜವಾಬ್ದಾರಿ ಔಷಧೀಯ ಸಸ್ಯಗಳ ಮಹತ್ವವನ್ನು ಅರಿತು ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅತಿಯಾದ ಕಟಾವು ಮತ್ತು ಅರಣ್ಯ ನಾಶದಿಂದ ಸುಮಾರು 15–20% ಔಷಧೀಯ ಸಸ್ಯಗಳು ಅಪಾಯದಲ್ಲಿರುವುದರಿಂದ ವಿದ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ ಕಂಡು ಬರುವ ಔಷಧೀಯ ಸಸ್ಯಗಳ ಪರಿಚಯ ಅವುಗಳ ವೈಜ್ಞಾನಿಕ ಹೆಸರು ಮತ್ತು ಅದರ ಉಪಯೋಗಗಳನ್ನು ದಾಖಲಿಸುವ ಮತ್ತು ಪ್ರಭೇದಗಳನ್ನು ರಕ್ಷಿಸುವ ರಚನಾತ್ಮಕ ಚಟುವಟಿಕೆಯನ್ನು ನೀಡಲಾಯಿತು.ವಿದ್ಯಾರ್ಥಿಗಳು ಸುಮಾರು 82 ಜಾತಿಯ ಔಷಧೀಯ ಸಸ್ಯಗಳನ್ನು ಸಂಗ್ರಹಿಸಿ ಮಾಹಿತಿಯನ್ನು ಪ್ರಸ್ತುತಪಡಿಸಿದರು.
ಸುಮಾರು 82 ವಿವಿಧ ಜಾತಿಯ ಔಷಧಿಯ ಸಸ್ಯಗಳ ಪ್ರದರ್ಶನ ಮತ್ತು ಮಾಹಿತಿಗಳನ್ನು ವಿದ್ಯಾರ್ಥಿಗಳು ನೀಡಿದರು.
ತುಳಸಿ, ಬೇವು,ಅಲೋವೆರಾ,ಅರಿಶಿನ,ಶುಂಠಿ,ಬೆಳ್ಳುಳ್ಳಿ,
ನಿಂಬೆ,ಅಶ್ವಗಂಧೆ,ಬ್ರಾಹ್ಮಿ,ಶತಾವರಿ ,ಪುದೀನಾ
ಹರಿದ್ರಾ ,ಅಮೃತಬಳ್ಳಿ ಹಿಬಿಸ್ಕಸ್ (ದಾಸವಾಳ), ಕರಿ ಮೆಣಸು,ಜಿನ್ಸೆಂಗ್ ಮುಂತಾದವುಗಳು ಔಷಧಿಯ ಸಸ್ಯಗಳಾಗಿವೆ.
ಅತ್ಯುತ್ತಮ ವರದಿ ಹಾಗೂ ದಾಖಲಿಕರಣವನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ವಿಜ್ಞಾನ ಸಂಘದ ಸಂಚಾಲಕಿ ಶ್ರೀಮತಿ ರಾಜಶ್ರೀ ಕಾರ್ಯಕ್ರಮ ಸಂಘಟಿಸಿದರು.