-->

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ  ಫೆ.4 ರಿಂದ 10 ರ ತನಕ  ಬ್ರಹ್ಮ ಕಲಶೋತ್ಸವ ಮತ್ತು ನೇಮೋತ್ಸವ

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಫೆ.4 ರಿಂದ 10 ರ ತನಕ ಬ್ರಹ್ಮ ಕಲಶೋತ್ಸವ ಮತ್ತು ನೇಮೋತ್ಸವ



ಹಳೆಯಂಗಡಿ: ಸಸಿಹಿತ್ಲುವಿನ  ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ  ಫೆ.4 ರಿಂದ 10 ರ ತನಕ  ಬ್ರಹ್ಮ ಕಲಶೋತ್ಸವ ಮತ್ತು ನೇಮೋತ್ಸವವು ವಿಜೃಂಭಣೆಯಿಂದ  ಜರುಗಲಿದೆ ಎಂದು ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ  ಅಧ್ಯಕ್ಷ ಸಿ.ಬಿ ಕರ್ಕೇರ ಮಾಹಿತಿ ನೀಡಿದರು.ಅವರು ಕ್ಷೇತ್ರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೈವಸ್ಥಾನದ  ಜೀರ್ಣೋದ್ಧಾರದ ಕಾಮಗಾರಿಗಳು  ಬಹುತೇಕ ಪೂರ್ಣಗೊಂಡಿದ್ದು ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಕ್ಷೇತ್ರ ಸಜ್ಜಾಗಿ ನಿಂತಿದೆ. ಫೆ.4 ರಿಂದ ಮೊದಲ್ಗೊಂಡು 10 ರ ತನಕ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಶ್ರೀಕ್ಷೇತ್ರದಲ್ಲಿ ಜರುಗಲಿದೆ.
"ಬಡವರೇ ತುಂಬಿರುವ ಸಸಿಹಿತ್ಲು  ಎಂಬ  ಸಣ್ಣ ಗ್ರಾಮದಲ್ಲಿ ನಾಲ್ಕು ಕರೆ ಸಮಾಜ ಒಟ್ಟಾಗಿ ಸುಮಾರು 3.5 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಸಿದ್ಧಪಡಿಸಬೇಕಿದ್ದರೆ ಇದು ಉಳ್ಳಾಯ ಮತ್ತು ಪರಿವಾರ ಶಕ್ತಿಗಳ ಕಾರ್ನಿಕವಲ್ಲದೆ ನಮ್ಮಿಂದ ಆದದ್ದು ಏನೂ ಇಲ್ಲ.'''ವೆಂದು ಅವರು ತಿಳಿಸಿದರು.

ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ತುಂಬಾ ಹೆದರಿಕೆ ಇತ್ತು. ಅದೆಷ್ಟೋ ವರ್ಷಗಳಿಂದ ಕನಸಾಗಿಯೇ ಉಳಿದಿದ್ದ ಈ ಯೋಜನೆ ಕೈಗೂಡಲು ಸಾಧ್ಯವೇ ಎಂಬ ಭಯ ಆವರಿಸಿದ್ದ ಸಂದರ್ಭದಲ್ಲಿ ಕ್ಷೇತ್ರದ ಶಕ್ತಿಗಳು ಹಿಂದಿನಿಂದ ನಿಂತು ಸಮಸ್ತ ಭಕ್ತರಿಗೆ ಅಭಯ ಕೊಟ್ಟ ಪರಿಣಾವಾಗಿ ಇಷ್ಟು ದೊಡ್ಡ ಯೋಜನೆ ಸಿದ್ಧವಾಗಿ ನಿಂತಿದೆ ಎಂದು ಅವರು ತಿಳಿಸಿದರು.

"ನಮ್ಮ ಹೃದಯಂತರಾಳದ ಮನವಿಗೆ ದಾನಿಗಳು ಸಕಾರಾತ್ಮವಾಗಿ ಸ್ಪಂದಿಸಿದ ಫಲವಿದು. ದೈವಸ್ಥಾನ ಇಡೀ ಶಿಲಾಮಯವಾಗಿ ಆಗಬೇಕೆಂಬುದು ನಮ್ಮ ಹೆಬ್ಬಯಕೆ ಆಗಿತ್ತು.ನಾವು ನಿರೀಕ್ಷಿಸಿದಂತೆ ಎಲ್ಲ ಕಡೆಯಿಂದ ಹಣಕಾಸಿನ ನೆರವು ಬಂದಿದ್ದರಿಂದ ಈ ಯೋಜನೆ ಯಶಸ್ವಿ ಆಯಿತು" ಎಂದು ಅವರು ತಿಳಿಸಿದರು.

ದೈವಸ್ಥಾನದ ಒಳಾಂಗಣದಲ್ಲಿ ಫೆ.4 ರಿಂದ 8 ರ ತನಕ ನಿರಂತರ ವೈದಿಕ ವಿಧಿ ವಿಧಾನಗಳು, ಋತ್ವಿಜರ ನೇತೃತ್ವದಲ್ಲಿ ನಡೆಯುತ್ತಿದ್ದರೆ ಹೊರಾಂಗಣದಲ್ಲಿ ಹಾಕಿರುವ ಎರಡು ವೇದಿಕೆಯಲ್ಲಿ ಪ್ರತ್ಯೇಕವಾಗಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಒಂದು ವೇದಿಕೆಗೆ "ಉಳ್ಳಾಯ ಮದಿಪು ಚಾವಡಿ" ಹೆಸರಲಿಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಕಾಂತುಲಕಣ ಗಡಿಪುದಾನ ಯಾನೆ ಪಠೇಲ್ ಯಾದವ ಜಿ. ಬಂಗೇರ ಸಾಂಸ್ಕೃತಿಕ ವೇದಿಕೆ ಎಂದು ಹೆಸರಿಡಲಾಗಿದೆ. ಫೆ.4ರಿಂದ 8 ರ ತನಕ ನಿರಂತರ

ಭಜನಾ ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಗೆ "ಕಾಂತಾಬಾರೆ ಬುಧಾಬಾರೆ ಭಜಕ ವೇದಿಕ ಎಂದು ಹೆಸರಿಡಲಾಗಿದೆ ಎಂದು ಅವರು ತಿಳಿಸಿದರು.

ಇತಿಹಾಸ ಪುರುಷರಾದ ಕಾಂತಾಬಾರೆ ಬುದಾಬಾರೆಯರು ಸುಮಾರು 800 ವರ್ಷಗಳ ಹಿಂದೆ ಸ್ಥಾಪಿಸಿದ ಈ ಗರೋಡಿಯನ್ನು ಸದ್ಯೋಭವಿಷ್ಯದಲ್ಲಿ ಅವಿಸ್ಮರಣೀಯವಾಗಿ ಉಳಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಯೋಜನೆಗಳೆಲ್ಲ ಸಾಕಾರಗೊಳ್ಳುವ ಭರವಸೆ ಇದೆ ಎಂದು ಅವರು ಹೇಳಿದರು.

ಈ ದೈವಸ್ಥಾನ ಸಸಿಹಿತ್ಲುವಿನ  ಕಡಲಕಿನಾರೆಗೆ ಹೊಂದಿಕೊಂಡಿರುವುದರಿಂದ ಮಾತ್ರವಲ್ಲದೆ ಪ್ರವಾಸಿ ತಾಣ ಈ ಜಾಗದಲ್ಲೇ ಇರುವುದರಿಂದ ಸದ್ಯೋಭವಿಷ್ಯದಲ್ಲಿ ಇದನ್ನು ಒಂದು ವಿಶಿಷ್ಟ ಕಲ್ಪನೆಯಲ್ಲಿ ಅಭಿವೃದ್ಧಿಪಡಿಸಿ ಆ ಮೂಲಕ ಧಾರ್ಮಿಕ ದತ್ತಿ ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಆಶಯ ನಮ್ಮದು ಎಂದು ಅವರು ತಿಳಿಸಿದರು. ಹೆಚ್ಚಿನ  ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಈ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಸುರಕ್ಷತಾ ವ್ಯವಸ್ಥೆ ಎಲ್ಲ ಸಿದ್ಧತೆಗಳನ್ನು ಅರ್ಥಪೂರ್ಣವಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.

ಶ್ರೀ ಉಳ್ಳಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬುದಾಬಾರೆ ಮತ್ತು ಮಾಯಂದಾಲ್ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದ್ದು, ಎದುರಿನ ಗೋಪುರವನ್ನು ನವೀಕರಿಸಲಾಗಿದೆಯಲ್ಲದೆ ಪ್ರವೇಶದ್ವಾರವನ್ನು ಉದ್ಘಾಟಿಸಲಾಗುವುದು ಎಂದು ಅವರು ತಿಳಿಸಿದರು.

ಈ ಜೀರ್ಣೋದ್ಧಾರ ಯಶಸ್ವಿ ಆಗುವ ನಿಟ್ಟಿನಲ್ಲಿ ಊರಿನ ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ, ಮಹಿಳಾ ಸಮಿತಿ ಮಾತ್ರವಲ್ಲದೆ ಮುಂಬೈ, ಬೆಂಗಳೂರು ಮತ್ತು ಹೊರನಾಡಿನಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು ಅವರೆಲ್ಲರ ಒಟ್ಟು ಪ್ರಯತ್ನದ ಫಲವೇ ಇಷ್ಟು ದೊಡ್ಡ ಯೋಜನೆಯನ್ನು ಯಶಸ್ವಿಗೊಳಿಸಲು ಕಾರಣವಾಗಿದೆ ಎಂದು ಅವರು ತಿಳಿಸಿದರು.

ಈ ಬೃಹತ್ ಯೋಜನೆ ಯಶಸ್ವಿಯಾಗಿ ನಡೆಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಸಮಿತಿಗಳು ಅತ್ಯಂತ ಯಶಸ್ವಿಯಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಗೌರವ ಸಲಹೆಗಾರ ಚಂದ್ರಶೇಖರ ನಾನಿಲ್, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್ ಕೋಟ್ಯಾನ್, ಸಂಚಾಲಕ ಪದ್ಮನಾಭ ಸಸಿಹಿತ್ಲು,ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್,  ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ಆ‌ರ್ ಕೋಟ್ಯಾನ್, ಉಪಾಧ್ಯಕ್ಷ ಅನಿಲ್‌ ಪೂಜಾರಿ,ಕೋಶಾಧಿಕಾರಿ ಎಸ್.ದಯಾನಂದ್,ಪಠೇಲ್ ಮನೆತನದ  ಕಾಂತುಲಕಣ ಗಡಿಪ್ರಧಾನ ಮನೆತನದ   ನಿರಂಜನ್ ಬಂಗೇರ ಮತ್ತು ಲೀಲಾಧರ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕ ಸುರೇಶ್ ಪೂಜಾರಿ ಮತ್ತು ದಾಮೋದರ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ, ಗೌರವಾಧ್ಯಕ್ಷೆ ಪುಷ್ಪಾ ದಯಾನಂದ್ ,ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಸ್. ಆ‌ರ್. ಪ್ರಭಾತ್‌, ಆಡಳಿತ ಸಮಿತಿ ಕಾರ್ಯದರ್ಶಿ ನವೀನ್ ಕುಮಾ‌ರ್, ಜೊತೆ ಕಾರ್ಯದರ್ಶಿ ಹರೀಶ್ ಕುಮಾರ್, ಜೊತೆ ಕೋಶಾಧಿಕಾರಿ ಯತೀಶ್ ಸಾಲ್ಯಾನ್, ಮುಂಬೈ ಸಮಿತಿಯ ರವೀಂದ್ರ ಶಾಂತಿ,ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ