ಕಿನ್ನಿಗೋಳಿ ಯುಗಪುರುಷದಲ್ಲಿ ಸಾಹಿತ್ಯಾವಲೋಕನ
Friday, February 27, 2026
ಕಿನ್ನಿಗೋಳಿ: ಸಾಹಿತ್ಯಿಕ ಕಾರ್ಯಕ್ರಮಗಳು ಕನ್ನಡ ಹಾಗೂ ಕನ್ನಡ ಶಾಲೆಗಳ ಉಳಿವಿಗೆ ಪೂರಕ ಕೆಲಸ ಮಾಡಬೇಕೆಂದು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು. ಅವರು ಶುಕ್ರವಾರದಂದು ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಕಥಾಬಿಂದು ಪ್ರಕಾಶನದ ಸಾರಥ್ಯದಲ್ಲಿ ನಡೆದ ಸಾಹಿತ್ಯಾವಲೋಕನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆ. ವಿ. ಲಕ್ಷ್ಮಣ ಮೂರ್ತಿಯವರ ಕನ್ನಡ ಕೃತಿ ಸುನೀತಾ ಪ್ರದೀಪ್‌ಕುಮಾರ್ ರವರ ತುಳು ಅನುವಾದಿತ 'ಶ್ರೀ ಮಾತಾ ವೈಷ್ಣೋದೇವಿ', ಜಾನಕೀದೇವಿಯವರ 'ಬೃಂದಾವನ', ಪ್ರೇಮಪಿ ವೈ.ಕೆ ಮೋಳೆಯವರ 'ನೀಲಿರಾಗ', ನಾ. ಭಾ. ಕೆಂಪರಾಜ್ ಶಾಂತಲರವರ 'ನಾ ಕಂಡಂತೆ ನನ್ನ ಅನ್ನಪೂರ್ಣೇಶ್ವರೀ ಶಾಂತಲರಾಜ್' ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀಪತಿ ಭಟ್, ಕೊಳ್ಚಪ್ಪೆ ಗೋವಿಂದ ಭಟ್, ಕೆ. ವಿ. ಲಕ್ಷ್ಮಣ್ ಮೂರ್ತಿ, ಪ್ರದೀಪ್ ಕುಮಾರ ಕಲ್ಕೂರ, ಕಸ್ತೂರಿ ಪಂಜ, ಜೊಸ್ಸಿ ಪಿಂಟೋ ಮತ್ತಿತರರಿದ್ದರು. ಪ್ರಕಾಶ್ ಸುವರ್ಣ ಹಾಗೂ ಅನಿತಾ ಶೆಣೈಯವರನ್ನು ಸಮ್ಮಾನಿಸಲಾಯಿತು. ಜಯಾನಂದ ಪೆರಾಜೆ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ಪ್ರಸ್ತಾವನೆಗೈದರು. ಡಾ.ಸತೀಶ್ ಎನ್. ಬಂಗೇರ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ 20 ಕವಿಗಳಿಂದ ಕವಿಗೋಷ್ಠಿ ನಡೆಯಿತು.