ತುಳುನಾಡಿನ ಬೆರ್ಮೆರ್ ಕೃತಿ ಬಿಡುಗಡೆ, ಸಂವಾದ
Wednesday, February 11, 2026
ಕಿನ್ನಿಗೋಳಿ : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಬರೆದ ತುಳುನಾಡಿನ ಬೆರ್ಮರು ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ತಾ. ೧೫ರ ಭಾನುವಾರ ಸಂಜೆ ೩.೪೫ಕ್ಕೆ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ನಡೆಯಲಿದೆ. ಕೆ.ಎಲ್.ಕುಂಡಂತಾಯ, ಪೊಸ್ರಾಲು ರಾಘವೇಂದ್ರ ಭಟ್, ಜಗದೀಶ ಶೆಟ್ಟಿ ನಡಿಗುತ್ತು, ಸತ್ಯಶಂಕರ ಶೆಟ್ಟಿ ಭಾಗವಹಿಸಲಿದ್ದಾರೆ.
ತುಳುನಾಡಿನ ಪ್ರಧಾನ ಆರಾಧ್ಯ ದೈವವಾದ ಬೆರ್ಮೆರ್ ಎಂದರೆ ಯಾರು ಎನ್ನುವ ವಿಚಾರ ವಿದ್ವಾಂಸರಿಂದ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿದೆ. ಬೆರ್ಮೆರ ಯಾರು ಎಂಬ ಚರ್ಚೆಗೆ ಹೊಸ ದಿಕ್ಕನ್ನು ತೋರಿಸಿದ ಡಾ.ಬಿ. ಜನಾರ್ದನ ಭಟ್ಟರು ಎರಡು ಬಗೆಯ ಬೆರ್ಮರನ್ನು ಗುರುತಿಸಿದ್ದಾರೆ. ಶಾಲಿವಾಹನನು ತುಳುನಾಡಿನ ಸಾತವಾಹನ ಅರಸನೆಂಬ ಗೋವಿಂದ ಪೈಗಳ ಸೂಚನೆಯನ್ನು ವಿಸ್ತರಿಸಿ ಶಾಸ್ತಾವು ಅಥವಾ ಶಾಸ್ತಾರನೆ ಭೂತ ಬ್ರಹ್ಮ ಎಂಬ ವಾದವನ್ನು ಹೊಸದಾಗಿ ಮಂಡಿಸಿದ್ದಾರೆ. ಜೈನ ಬ್ರಹ್ಮನ ಆರಾಧನೆಯೂ ಸೇರಿಕೊಂಡು ಸಂಕೀರ್ಣವಾಗಿ ಬೆಳೆದ ಈ ನಾಡಿನ ದೈವಾರಾಧನೆಯಲ್ಲಿ ಬೆರ್ಮೆರೆಂದರೆ ದೇವರೆಂಬ ಅರ್ಥದಲ್ಲಿ ಕುಲಮೂಲದ ವೀರಪುರುಷರನ್ನೂ ಬೆರ್ಮರಾಗಿ ಆರಾಧಿಸುವುದನ್ನೂ ಅವರು ಈ ಕೃತಿಯಲ್ಲಿ ಗುರುತಿಸಿದ್ದಾರೆ. ವೀರಪುರುಷರನ್ನೂ ಬೆರ್ಮರಾಗಿ ಆರಾಧಿಸುವುದನ್ನು ಅವರು ಗುರುತಿಸಿದ್ದಾರೆ. ಪುಸ್ತಕ ಬಿಡುಗಡೆಯ ಜೊತೆಗೆ ಸಂವಾದವೂ ನಡೆಯಲಿದೆ ಎಂದು ಕಸಾಪ ಮೂಲ್ಕಿ ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.