Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಾರ್ಚ್ ೧ : ಕಟೀಲಿನಲ್ಲಿ ನಂದಿನಿ ನದಿ ಮಧ್ಯದ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ


ಕಟೀಲು : ಕಟೀಲು ದೇಗುಲದ ನಂದಿನೀ ನದಿ ಮಧ್ಯದ ಕುದ್ರವಿನಲ್ಲಿ ಮಾರ್ಚ್ ೧ರ ಭಾನುವಾರ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ವೇದಿಕೆಗಳಲ್ಲಿ ನಡೆಯಲಿದೆ. ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನ ಬೆಳಿಗ್ಗೆ ೮.೪೫ಕ್ಕೆ ಕಟೀಲು ರಥಬೀದಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆಯೊಂದಿಗೆ ಆರಂಭವಾಗಲಿದೆ. ವಾಸುದೇವ ಆಸ್ರಣ್ಣ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಧ್ವಜಾರೋಹಣದ ಬಳಿಕ ಶಾಸಕ ಉಮಾನಾಥ ಕೋಟ್ಯಾನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ನಲವತ್ತಕ್ಕೂ ಹೆಚ್ಚು ಖ್ಯಾತ ಹಾಗೂ ಯುವ ಚಿತ್ರ ಕಲಾವಿದರು ನಂದಿನಿ ನದಿ ಹಾಗೂ ಕಟೀಲು ಕ್ಷೇತ್ರದ ಕುರಿತಾಗಿ ಚಿತ್ರಗಳನ್ನು ರಚಿಸಲಿದ್ದು ಈ ಚಿತ್ರಕೂಟಕ್ಕೆ ಪರಿಸರ ಪ್ರವಾಸೋದ್ಯಮ ಮಂಡಳಿಯ ಶಾಲೆಟ್ ಪಿಂಟೋ ಚಾಲನೆ ನೀಡಲಿದ್ದಾರೆ. ಸಮಾನಾಂತರ ವೇದಿಕೆಯಲ್ಲಿ ಮೂಲ್ಕಿ ತಾಲೂಕಿನ ಕವಿಗಳಿಂದ ಕವಿಗೋಷ್ಟಿ, ಕಥಾಗೋಷ್ಟಿ, ಮಕ್ಕಳ ಕಥೆಗಳ ಓದು ನಡೆಯಲಿದ್ದು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದು, ಚರ್ಚೆ, ಸಂವಾದಗಳ ಪಟ್ಟಾಂಗಕಟ್ಟೆಯನ್ನು ದಯಾನಂದ ಕಟೀಲ್ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ನಿಕಟಪೂರ್ವ ಸಮ್ಮೇಳಾನಾಧ್ಯಕ್ಷ ಶ್ರೀಧರ ಡಿ.ಎಸ್, ಕಥೆಗಾರ ಹಂಝ ಮಲಾರ್, ತಹಶೀಲ್ದಾರ್ ಶ್ರೀಧರ ಮುಂದಲಮನಿ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹರಿದಾಸ ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯ ಅವರ ಕುರಿತು ಡಾ.ಬಿ. ಜನಾರ್ದನ ಭಟ್, ಖ್ಯಾತ ಕಥೆಗಾರ ಬಾಗಲೋಡಿ ದೇವರಾಯರ ಬಗ್ಗೆ ಪ್ರೊ. ಅರವಿಂದ ಹೆಬ್ಬಾರ್, ಖ್ಯಾತ ಸಾಹಿತಿ ಎಂ. ಎನ್. ಕಾಮತ್ ಅವರ ಕುರಿತು ದೇವು ಹನೇಹಳ್ಳಿ, ಕಥೆಗಾರ ಎಂ. ವ್ಯಾಸ ಅವರ ಬಗ್ಗೆ ವರದರಾಜ ಚಂದ್ರಗಿರಿ, ಸೇಡಿಯಾಪು ಕೃಷ್ಣ ಭಟ್ಟರ ಕುರಿತು ಪಾದೇಕಲ್ಲು ವಿಷ್ಣು ಭಟ್ ಮಾತನಾಡಲಿದ್ದಾರೆ. ಹಿರಿಯ ಸಾಹಿತಿಗಳ ಕಾವ್ಯಗಾಯನ, ಕಥಾವಾಚನ ನಡೆಯಲಿದೆ. ಡಾ. ವಾಸುದೇವ ಬೆಳ್ಳೆ, ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿಯವರ ಜೊತೆ ಸಂವಾದ ನಡೆಸಲಿದ್ದಾರೆ.

ಐದು ಕೃತಿಗಳ ಬಿಡುಗಡೆ  : ಕಮಲಾದೇವಿಪ್ರಸಾದ ಆಸ್ರಣ್ಣ ಅವರ ಲೇಖನಗಳ ಸಂಗ್ರಹ ಯಕ್ಷಾಕೃತಿ, ಉದಯಕುಮಾರ ಹಬ್ಬು ಅವರ ನೆರೋದಾನ ಇಪ್ಪತ್ತು ಪ್ರೇಮಗೀತೆಗಳು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್, ಡಾ. ಸೋಂದಾ ಭಾಸ್ಕರ ಭಟ್ಟರ ಶ್ಲೋಕಸಾಗರ ಭಾಗ ಮೂರು, ಎಕ್ಕಾರು ಗ್ರಂಥಾಲಯದ ಸಂಚಿಕೆ ಪುಸ್ತಕಮನೆ ಹೀಗೆ ಐದು ಕೃತಿಗಳ ಬಿಡುಗಡೆ ಸಮ್ಮೇಳನದಲ್ಲಿ ನಡೆಯಲಿದೆ.

ಸಮಾಪನ
ಸಮಾಪನ ಕಾರ‍್ಯಕ್ರಮದಲ್ಲಿ ಸಾಹಿತಿ ಬಾಬು ಕೊರಗ ಸಮಾಪನದ ನುಡಿಗಳನ್ನಾಡಲಿದ್ದಾರೆ. ಖ್ಯಾತ ಕವಿ ವಿಲ್ಸನ್ ಕಟೀಲ್ ಸಮ್ಮೇಳನದ ಸಲುವಾಗಿ ಆಯೋಜಿಸಲಾದ ಸಾಹಿತ್ಯ ಸ್ಪರ್ಧೆಗಳ ಬಹುಮಾನ ವಿತರಿಸಲಿದ್ದಾರೆ. ಬರಹಗಾರ ಪ್ರಥ್ವೀರಾಜ ಕವತ್ತಾರು, ಅಜಾರು ನಾಗರಾಜ ರಾಯ ಮುಂತಾದವರು ಭಾಗವಹಿಸಲಿದ್ದಾರೆ.

ಮುಕ್ತ ಅವಕಾಶ : ಸಮಾನಾಂತರ ವೇದಿಕೆ ಹಾಗೂ ಪಟ್ಟಾಂಗಕಟ್ಟೆಯಲ್ಲಿ ತಾಲೂಕಿನ ಸಾಹಿತ್ಯಾಸಕ್ತರಿಗೆ, ಯುವ ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ತಮ್ಮ ಸ್ವರಚಿತ ಕವನ, ಕಥೆಗಳನ್ನು ಓದಬಹುದಾಗಿದೆ.

ಪ್ರಕೃತಿ ವಿಸ್ಮಯದ ಕುದ್ರು
ಕಟೀಲು ದೇಗುಲ ನಂದಿನೀ ನದಿಯ ದ್ವೀಪದಲ್ಲಿರುವುದು ಜನಜನಿತ. ಇದರ ಪಕ್ಕದ ಮತ್ತೊಂದು ಪುಟ್ಟ ದ್ವೀಪವಾಗಿರುವ ಕುದ್ರು ಕಿಂಡಿ ಅಣೆಕಟ್ಟುಗಳಿಂದಾಗಿ ಅರ್ಧ ಭಾಗ ನೀರಿನಿಂದ ತುಂಬಿ ಆಕರ್ಷಕವಾಗಿದೆ. ಯಾಜ್ಞಿಕ ವೃಕ್ಷಗಳು, ಉದ್ಯಾನವನಗಳಿಂದ ಈ ಕುದ್ರು ಕಂಗೊಳಿಸುತ್ತಿದ್ದು, ಈ ಪ್ರಕೃತಿ ಸೌಂದರ್ಯದ ಮಧ್ಯೆ ತೆರೆದ ಸಭಾಂಗಣಗಳಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಊಟ ಉಪಾಹಾರ ಸೇರಿದಂತೆ ಎಲ್ಲ ಸಹಕಾರವನ್ನು ಕಟೀಲು ದೇಗುಲ ನೀಡುತ್ತಿದೆ ಎಂದು ಸಮ್ಮೇಳನ ಸಂಚಾಲಕ, ಕಿನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ತಿಳಿಸಿದ್ದಾರೆ.
ಸಮ್ಮೇಳನಕ್ಕೆ ಬಂದವರಿಗೆಲ್ಲರಿಗೂ ಕನ್ನಡದ ಶಾಲು, ತರಕಾರಿ ಗಿಡ, ಪುಸ್ತಕ ನೀಡಲಾಗುತ್ತದೆ. ಪರಿಸರ ಪೂರಕ ವಸ್ತುಗಳು, ಖಾದಿ ಬಟ್ಟೆ, ಪುಸ್ತಕಗಳ ಮಾರಾಟ ವ್ಯವಸ್ಥೆ ರುತ್ತದೆ ಎಂದು ಗುರುರಾಜ್ ತಿಳಿಸಿದ್ದಾರೆ.