ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಮಾದರಿ ಯುವ ಗ್ರಾಮ ಸಭೆ
Thursday, February 19, 2026
ಬಜಪೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಇವರ ಮಾರ್ಗದರ್ಶನದಲ್ಲಿ “ಮಾದರಿ ಯುವ ಗ್ರಾಮ ಸಭೆ ಕಾರ್ಯಕ್ರಮವು ಬಡಗ ಎಕ್ಕಾರಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಪಾಠದಲ್ಲಿ ಕಲಿತು ನಂತರ ಪ್ರಾಯೋಗಿಕವಾಗಿ ಗ್ರಾಮ ಸಭೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಸಜ್ಜುಗೊಳಿಸಲು ಶಾಲೆಗಳಲ್ಲಿ ‘ಮಾದರಿ ಯುವ ಗ್ರಾಮಸಭೆ'ಯನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತದಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ, ನಾಯಕತ್ವದ ಗುಣ, ಸಂವಹನ ಕಲೆ ಮತ್ತು ಮುಕ್ತವಾಗಿ ಪ್ರಶ್ನಿಸುವ ಧೈರ್ಯವನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.ಶಾಲೆಯಲ್ಲಿ ನಡೆದ ಮಾದರಿ ಯುವ ಗ್ರಾಮಸಭೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ನಡೆಯುತ್ತಿರುವುದು ವಿಶೇಷವಾಗಿದೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುದೀಪ್ ಅಮೀನ್ ಅವರು ಪ್ರೌಢಶಾಲೆಯಲ್ಲಿ ನಡೆಯುವ ಮಾದರಿ ಯುವ ಗ್ರಾಮ ಸಭೆಯು ಯುವಜನರಲ್ಲಿ ಗ್ರಾಮಸಭೆಯ ಮಹತ್ವದ ಅರಿವು ಮೂಡಿಸಲಿ, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಕಾರ್ಯವೈಖರಿ ಪರಿಚಯಿಸಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲಿ. ಈ ಕಾರ್ಯಕ್ರಮವು ಯಶಸ್ಸನ್ನು ಕಾಣಲಿ ಎಂದು ಶುಭ ಹರಸಿದರು.
ವಿದ್ಯಾರ್ಥಿಗಳು ಗ್ರಾಮಸಭೆಯ ಮಾದರಿಯನ್ನು ಅನುಸರಿಸಿ ಅಧ್ಯಕ್ಷರು, ಉಪಾಧ್ಯಕ್ಷರು ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆ ಸಮುದಾಯ ಆರೋಗ್ಯ ಅಧಿಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು ಗ್ರಾಮ ಆಡಳಿತ ಅಧಿಕಾರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಗ್ರಂಥಾಲಯದ ಮೇಲ್ವಿಚಾರಕರು ಆಶಾ ಕಾರ್ಯಕರ್ತೆ ಹಾಗೂ ಗ್ರಾಮಸ್ಥರ ಪಾತ್ರಗಳನ್ನು ನಿರ್ವಹಿಸಿ ಸಭೆಯ ಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳು ಚರ್ಚೆ,ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಯುವಜನರ ಸಬಲೀಕರಣ ಕುರಿತಂತೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮಂಡಿಸಿದರು. ವಿದ್ಯಾರ್ಥಿಗಳ ಚರ್ಚಾ ಕೌಶಲ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳು ಗಮನ ಸಳೆದವು.
ಶಾಲಾ ಶಿಕ್ಷಕರಾದ ಪೂರ್ಣಿಮಾ ಎಚ್.ಎಂ ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಎಕ್ಕಾರು ಗ್ರಂಥಪಾಲಕಿ ಶ್ರೀಮತಿ ಹೇಮಲತಾ ಶರ್ಮ ರವರು ಮಾತನಾಡಿ ಈ ಮಾದರಿ ಯುವ ಗ್ರಾಮ ಸಭೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಸಾರ್ವಜನಿಕ ಸಮಸ್ಯೆಗಳ ಅರಿವು ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳು ಬೆಳೆಯುತ್ತವೆ ಎಂದರು.
(ಜಾಹೀರಾತು)
ಕಾರ್ಯಕ್ರಮದಲ್ಲಿ ಸದಸ್ಯರಾದ ಹೇಮಚಂದ್ರಶೆಟ್ಟಿ, ಎಕ್ಕಾರು ಗ್ರಂಥಾಲಯದ ಗ್ರಂಥಪಾಲಕರಾದ ಶ್ರೀಮತಿ ಹೇಮಲತಾ ಶರ್ಮ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಇಂದಿರಾ ಎನ್ ರಾವ್ ಸ್ವಾಗತಿಸಿದರು . ಡಾ. ಅನಿತ್ ಕುಮಾರ್ ಧನ್ಯವಾದವಿತ್ತರು. ಸಮರ್ಪಿಸಿದರು . ಮಾದರಿ ಯುವ ಗ್ರಾಮ ಸಭೆಯ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಕಾರ್ಯಕ್ರಮವನ್ನು ಶ್ರೀಮತಿ ಜ್ಯೋತಿ ಬಿ ನಿರೂಪಿಸಿದರು.
ಯುವ ಗ್ರಾಮ ಸಭೆಯಲ್ಲಿ ಚರ್ಚೆಗೆ ಬಂದ ವಿಚಾರಗಳು:
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳು ಚರ್ಚೆಗೆ ಬಂದವು. ಅಂಗನವಾಡಿ ಕಾರ್ಯಕರ್ತೆಯು ಮಕ್ಕಳ ಪೋಷಣೆಯನ್ನು ಸುಧಾರಿಸಲು ಅಂಗನವಾಡಿ ಬಳಿ ಕೈತೋಟವನ್ನು ಪ್ರಾರಂಭಿಸಲು ಗ್ರಾಮ ಪಂಚಾಯತಿಯ ವತಿಯಿಂದ ಅನುದಾನ ದೊರೆಯಬಹುದೇ ಎಂಬ ಪ್ರಶ್ನೆಯನ್ನು ಕೇಳಿದಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಬಾಲ ವಿಕಾಸ ಸಮಿತಿಯ ಸದಸ್ಯರೆಲ್ಲರೂ ಕೂಡಿ ಸಮಾಧಾನದ ಮೂಲಕ ಕೈತೋಟವನ್ನು ನಿರ್ಮಿಸಿಕೊಳ್ಳಬಹುದು ಕೈತೋಟಕ್ಕೆ ಬೇಕಾದ ಸಸಿಗಳನ್ನು ಪಂಚಾಯಿತಿಯ ಸ್ವಂತ ಸಂಪನ್ಮೂಲದಿಂದ ನಿಯಮದ ಇತಿಮಿತಿಯ ಒಳಗೆ ಖರೀದಿಸಿ ಕೊಡಬಹುದು ಎಂದು ಉತ್ತರಿಸಿದರು. ರೈತ ಪ್ರತಿನಿಧಿ ಒಬ್ಬರು ಮುಂದಿನ ತಿಂಗಳು ಮುಂಗಾರು ಪ್ರಾರಂಭವಾಗುತ್ತಿದೆ ಕೃಷಿಗೆ ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳ ಲಭ್ಯತೆಯ ಬಗ್ಗೆ ಪ್ರಶ್ನಿಸಿದಾಗ ಕೃಷಿ ಅಧಿಕಾರಿಯವರು ಮುಂದಿನ ವಾರ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗುವುದು ರೈತರು ಅಲ್ಲಿಂದ ಪಡೆದುಕೊಳ್ಳಬಹುದು ಎಂದು ಸಮರ್ಥಿಸಿದರು. ವಿಧವಾ ಮಹಿಳೆಯೊಬ್ಬರು ತನ್ನ ಪಿಂಚಣಿಯ ಕುರಿತು ಹಿಂದಿನ ಸಭೆಯಲ್ಲಿ ನೀಡಿದ ಭರವಸೆಯ ಬಗ್ಗೆ ಪ್ರಸ್ತಾಪಿಸಿದಾಗ ಗ್ರಾಮ ಆಡಳಿತ ಅಧಿಕಾರಿಯವರು ತಮ್ಮ ಕಚೇರಿಗೆ ದಾಖಲೆಗಳ ಜೊತೆಗೆ ಬಂದು ಪಿಂಚಣಿ ಬಾರದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟೀಕರಣ ನೀಡಿದರು.